Advertisement

ಮಲೇಷಿಯಾ ಕರ್ನಾಟಕ ರಾಜ್ಯೋತ್ಸವ

06:20 PM Nov 14, 2020 | mahesh |

ಮಲೇಷ್ಯಾ: “ಸ್ವರ್ಗದಿಂದ ಬಂದು ಬೃಂದಾವನ ಕಳಚಿ ಕೆಳಗೆ ಬಿದ್ದು , ಅದು ಕರ್ನಾಟಕವಾಯಿತು’. ಅಂತ ನಮ್ಮ ಕವಿಗಳು ವರ್ಣಿಸುತ್ತಾರೆ. ಅಂತ ಶ್ರೇಷ್ಠವಾದ ನಾಡಿನಿಂದ ಸಾವಿರಾರು ಕಿ.ಮೀ. ದೂರದಲ್ಲಿ ಇರುವ ಮಲೇಷಿಯಾ ಕನ್ನಡಿಗರ ಹಾಗೂ ನಮ್ಮ ಮಧ್ಯೆ ಸೇತುವೆಯಾಗಿ ಸಂಬಂಧಗಳನ್ನು ಬೆಸೆಯುತ್ತಿರುವುದು ಕನ್ನಡ ಭಾಷೆಯಾಗಿದೆ ಎಂದು ಚಂದನವನದ ಹೆಸರಾಂತ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಹೇಳಿದರು.

Advertisement

ಮಲೇಷಿಯಾ ಕನ್ನಡ ಸಂಘ ಹಮ್ಮಿಕೊಂಡಿದ್ದ ವರ್ಚುವಲ್‌ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ ಅವರು, “ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕುವೆಂಪು ಅವರ ಜನಜನಿತವಾದ ಮಾತಿನಂತೆ ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದ ಜನರಿಗೆ ಯಾವ ದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ, ಪ್ರೀತಿ, ಗೌರವ ಎಂದೆಂದಿಗೂ ಕಡಿಮೆಯಾಗುವುದಿಲ್ಲ ಎಂದರು.

ಕನ್ನಡ ಜನರ ಭಾಷೆ ಕನ್ನಡ, ನಡೆ ಕನ್ನಡ, ನುಡಿ ಕನ್ನಡ -ಅಷ್ಟೇ ಯಾಕೆ ಆಲೋಚನೆಗಳು ಮತ್ತು ಭಾವನೆಗಳೂ ಕೂಡ ಕನ್ನಡವೇ ಆಗಿರುತ್ತವೆ. ಕನ್ನಡ ಭಾಷೆಯ ಹಿರಿಮೆ -ಗರಿಮೆಗಳನ್ನು ಕುರಿತಾಗಿ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ನಾವು ಕನ್ನಡವನ್ನು ಓದುವುದರಿಂದ, ಬಳಸುವುದರಿಂದ, ಬರೆಯುವುದರಿಂದ ಭಾಷೆ ಬೆಳೆಯುತ್ತದೆ. ನಮ್ಮಲ್ಲಿ ಕನ್ನಡ ಸಾಹಿತ್ಯದ ಬಗೆಗೆ ಒಲವು ಉಂಟಾಗುತ್ತದೆ. ಕನ್ನಡ ಹಬ್ಬವನ್ನು ಕೇವಲ ಸಾಂಕೇತಿಕವಾಗಿ ಆಚರಿಸದೆ ನಿತ್ಯವೂ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಎಂದರು.

ಇದೇ ವೇಳೆ ನಟ ಹಾಗೂ ನಿರ್ದೇಶಕ ಸಿಹಿ ಕಹಿ ಚಂದ್ರು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕನ್ನಡ ನಮ್ಮ ಮಾತೃ ಭಾಷೆ. ಅದರ ಮೇಲೆ ಪ್ರೀತಿ ಇದ್ದರೆ ಮಾತ್ರ ನಮ್ಮ ನುಡಿಯ ಕಂಪನ್ನು ಪಸರಿಸಲು ಸಾಧ್ಯ. ಹಾಗಾಗಿ ಮೊದಲಿಗೆ ಕನ್ನಡಿಗರಾಗಿ, ಕನ್ನಡವನ್ನು ಪ್ರೀತಿಸಿ, ಉಳಿಸಿ ಬೆಳೆಸಬೇಕು ಎಂದರು.

ಜತೆಗೆ ಭಾರತದಿಂದ ದೂರ ಇದ್ದರೂ ಸತತವಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಲೇಷಿಯಾದ ಕನ್ನಡ ಸಂಘ ನಿರತವಾಗಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಮುಂದಿನ ಪೀಳಿಗೆಗೆ ಕನ್ನಡವನ್ನು ಆಸ್ವಾದಿಸುವ ಅವಕಾಶವನ್ನು ಕಲ್ಪಿಸುವಂತಹ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ್ದರು.

Advertisement

ಇದರೊಂದಿಗೆ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಟಿ.ಎನ್‌. ಸೀತಾರಾಮ್‌, ಸಂಗೀತ ನಿರ್ದೇಶಕ ವಿ. ಮನೋಹರ್‌, ನಟಿ ರಾಧಿಕಾ ನಾರಾಯಣ್‌ ವೀಡಿಯೋ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಸದಸ್ಯ ಶ್ರೀವೆಂಕಟೇಶ ಅವರ ಸ್ವಗೃಹ ದಲ್ಲಿ ತಾಯಿ ಭುವನೇಶ್ವರಿ ಪುಷ್ಪ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಸಂಘದ ಸದಸ್ಯ ನಾಗೇಂದ್ರ ಅವರು ಮಲೇಷಿಯಾ ಕನ್ನಡ ಸಂಘದ ಕಡೆಯಿಂದ ಆಯೋಜಿಸಲಾದ ಚಟುವಟಿಕೆಗಳು ಸಹಿತ ಲಾಕ್‌ಡೌನ್‌ ವೇಳೆಯಲ್ಲಿ ನೀಡಲಾದ ನೆರವಿನ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆನ್‌ಲೈನ್‌ ಮೂಲಕವೇ ಪುಟಾಣಿಗಳ ನೃತ್ಯ, ಯಕ್ಷಗಾನ, ಭರತನಾಟ್ಯ, ಗಾಯನ ಪ್ರಸಾರವಾಯಿತು.

ಸಂಘದ ಸದಸ್ಯೆಯರಾದ ಪೂಜಾ, ವಿದ್ಯಾ, ಶುಭಾ, ಪುಷ್ಪಾ ಮತ್ತು ಕಾವ್ಯ ಅವರ ನೃತ್ಯ ಪ್ರದರ್ಶನ ನೀಡಿದರು.
ಇದರೊಂದಿಗೆ ತಂಡದ ಇತರೆ ಸದಸ್ಯರು ನಾಟಕ, ಹಾಡುಗಾರಿಕೆ, ಗಿಟಾರ್‌ ಶೋ ಸಹಿತ ನಾನಾ ಕಲೆಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯೋತ್ಸವ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದ್ದರು.

ಜತೆಗೆ ಇತ್ತೀಚೆಗೆ ನಿಧನ ಹೊಂದಿದ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಹಾಡುವ ಮೂಲಕ ಅವರಿಗೆ ನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next