ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ಬರಹಗಾರ, ನಿರ್ದೇಶಕ ಕೆ.ಆರ್. ಸಚ್ಚಿದಾನಂದನ್ ಅವರು ಇಂದು ನಿಧನ ಹೊಂದಿದ್ದಾರೆ.
ಚಿತ್ರರಂಗದಲ್ಲಿ ಸಚಿ ಎಂದೇ ಹೆಸರುವಾಸಿಯಾಗಿದ್ದ ಇವರಿಗೆ 48 ವರ್ಷ ವಯಸ್ಸಾಗಿತ್ತು.
ತ್ರಿಶ್ಯೂರ್ ನಲ್ಲಿರುವ ಜುಬ್ಲೀ ಮಿಷನ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿರುವುದಾಗಿ ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ಮಂಗಳವಾರದಂದು ಆಸ್ಪತ್ರೆಗೆ ದಾಖಲುಗೊಂಡಿದ್ದ ಸಚಿ ಅವರು ಕಳೆದ ಎರಡು ದಿನಗಳಿಂದ ಕೃತಕ ಉಸಿರಾಟ ವ್ಯವಸ್ಥೆಯ ನಿಗಾದಲ್ಲಿದ್ದರು. ಆದರೆ ಇಂದು ರಾತ್ರಿ ಹೃದಯಾಘಾತ ಹಾಗೂ ಮಿದುಳಿಗೆ ಆಮ್ಲಜನಕ ಸರಬರಾಜು ಕೊರತೆ ಸಮಸ್ಯೆ ಕಾಣಿಸಿಕೊಂಡು ಕೊನೆಯುಸಿರೆಳೆದರು.
ತ್ರಿಶ್ಯೂರ್ ನ ಇನ್ನೊಂದು ಆಸ್ಪತ್ರೆಯಲ್ಲಿ ಪೃಷ್ಠ ಭಾಗದ ಮೂಳೆ ಬದಲಾಯಿಸುವಿಕೆ ಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಈ ಸಂದರ್ಭದಲ್ಲಿ ಅವರಿಗೆ ಲಘು ಹೃದಯಾಘಾತವಾಗಿತ್ತು.
ತ್ರಶ್ಯೂರ್ ನ ಕೊಡುಂಗಲ್ಲೂರ್ ನವರಾಗಿದ್ದ ಸಚ್ಚಿದಾನಂದ ಅವರು ಚಿತ್ರರಂಗಕ್ಕೆ ಬರುವ ಮುನ್ನ ಕೇರಳ ಹೈ ಕೋರ್ಟ್ ನಲ್ಲಿ ಎಂಟು ವರ್ಷಗಳ ಕಾಲ ಕ್ರಿಮಿನಲ್ ಹಾಗೂ ಸಂವಿಧಾನ ಕಾನೂನು ವಕೀಲಿಕೆಯನ್ನು ಮಾಡಿಕೊಂಡಿದ್ದರು.
ಸೇತುನಾಥನ್ ಜೊತೆಯಲ್ಲಿ ಬರಹಗಾರರಾಗಿ ಹಾಗೂ ಚಿತ್ರಕಥೆ ರಚನೆಕಾರರಾಗಿ ಕಾಣಿಸಿಕೊಳ್ಳುವ ಮೂಲಕ ಸಚಿ ಅವರು ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದ್ದರು. ಬಳಿಕ ಚಿತ್ರರಂಗದಲ್ಲಿ ಈ ಜೋಡಿ ಸಚಿ-ಸೇತು ಎಂದೇ ಹೆಸರುವಾಸಿಯಾಗಿತ್ತು.
ಈ ಜೋಡಿ ಚಾಕೊಲೇಟ್, ಮೇಕಪ್ ಮ್ಯಾನ್, ರಾಬಿನ್ ಹುಡ್ ಮತ್ತು ಸೀನಿಯರ್ಸ್ ನಂತಹ ಹಿಟ್ ಚಿತ್ರಗಳ ಬರಹಗಾರರಾಗಿದ್ದರು. ಆದರೆ ಡಬಲ್ಸ್ ಚಿತ್ರದ ಸೋಲಿನೊಂದಿಗೆ ಈ ಜೋಡಿ ಬೇರ್ಪಟ್ಟಿತ್ತು.
ಬಳಿಕ 2015ರಲ್ಲಿ ಪೃಥ್ವಿರಾಜ್ ನಟನೆಯ ಅನಾರ್ಕಲಿ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಚಿ ಅವರು ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಆದರೆ ಸಚಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿದ್ದು ಪೃಥ್ವಿರಾಜ್ ಹಾಗೂ ಬಿಜು ಮೆನನ್ ನಟಿಸಿದ್ದ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ. ಕಳೆದ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿದ್ದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಅತೀ ಹೆಚ್ಚಿನ ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವಾಗಲೇ ಲಾಕ್ ಡೌನ್ ಘೋಷಣೆಗೊಂಡಿತ್ತು. ಇದು ಸಚಿ ನಿರ್ದೇಶನದ ಎರಡನೇ ಚಿತ್ರವಾಗಿತ್ತು.
ಈ ಚಿತ್ರ ಇತ್ತೀಚೆಗಷ್ಟೇ ಅಮೆಝಾನ್ ಪ್ರೈಮ್ ನಲ್ಲೂ ಬಿಡುಗಡೆಗೊಂಡು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿತ್ತು. ಹಾಗೂ ಈ ಚಿತ್ರ ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಹಾಗೂ ರವಿತೇಜ ನಟನೆಯಲ್ಲಿ ರಿಮೇಕ್ ಆಗುತ್ತಿದೆ ಮತ್ತು ಈ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ನಟ ಜಾನ್ ಅಬ್ರಹಾಂ ಅವರು ಕೊಂಡುಕೊಂಡಿದ್ದಾರೆ.
ಪೃಥ್ವಿರಾಜ್ ಹಾಗೂ ಸೂರಜ್ ವೆಂಜರಮೂಡು ಅಭಿನಯದ 2020ರ ಇನ್ನೊಂದು ಚಿತ್ರ ಡ್ರೈವಿಂಗ್ ಲೈಸನ್ಸ್ ನ ಚಿತ್ರಕಥೆ ಸಚಿ ಅವರದ್ದೇ ಆಗಿದ್ದು ಈ ಚಿತ್ರವೂ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.
ಹೀಗೆ ಪ್ರತಿಭಾನ್ವಿತ ಚಿತ್ರ ಬರಹಗಾರ ಹಾಗೂ ನಿರ್ದೇಶಕರಾಗಿದ್ದ ಸಚ್ಚಿದಾನಂದ ಚಿತ್ರರಂಗದಲ್ಲಿ ಮಿಂಚಿ ಹೆಸರು ಮಾಡುವ ಮುನ್ನವೇ ನಿದನ ಹೊಂದಿರುವುದು ಮಲಯಾಳಂ ಚಿತ್ರರಂಗಕ್ಕಾಗಿರುವ ಬಹುದೊಡ್ಡ ನಷ್ಟವಾಗಿದೆ.