Advertisement

ಅಂತೂ ಕೆಂಪಗೆರಿ ಜಲಾಶಯಕ್ಕೆ ಹರಿದು ಬಂದಳು ಗಂಗ

05:29 PM Aug 10, 2018 | |

ನರಗುಂದ: ಕಳೆದ ಒಂದೂವರೆ ತಿಂಗಳಿಂದ ತನ್ನ ಒಡಲು ಬರಿದಾಗಿಸಿಕೊಂಡು ಪಟ್ಟಣದ ಜನತೆಗೆ ಕುಡಿವ ನೀರಿನ ಹಾಹಾಕಾರ ಸೃಷ್ಟಿಸಿದ್ದ ಪಟ್ಟಣದ ಕೆಂಪಗೆರಿ ಜಲಾಶಯ ಒಡಲಾಳಕ್ಕೆ ಅಂತೂ ಗಂಗಾಮಾತೆ (ನೀರು) ಬಂದು ಸೇರುತ್ತಿದೆ. ಮಲಪ್ರಭಾ ಕಾಲುವೆಗೆ ನೀರು ಹರಿಸಲಾಗಿದ್ದು, ಪಟ್ಟಣದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

Advertisement

ಜಿಲ್ಲಾಡಳಿತಕ್ಕೆ ಪುರಸಭೆ ಮೂಲಕ ತೀವ್ರ ಒತ್ತಡ ಮಧ್ಯೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಕುಡಿವ ನೀರಿಗಾಗಿ ಮಲಪ್ರಭಾ ನರಗುಂದ ಶಾಖಾ ಕಾಲುವೆಗೆ ನೀರು ಹರಿಸಲು ಅನುಮತಿ ನೀಡಿದ್ದರಿಂದ ಮಂಗಳವಾರ ಕಾಲುವೆಗೆ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆಗೆ ಕಾಲುವೆ ನೀರು ಕೆಂಪಗೆರಿ ಒಡಲು ಸೇರಿಕೊಳ್ಳುತ್ತಿದೆ. 

ತಪ್ಪಿದ ಹಾಹಾಕಾರ: ಇಡೀ ಪಟ್ಟಣಕ್ಕೆ ಕುಡಿವ ನೀರಿನ ಏಕೈಕ ಮೂಲ ಕೆಂಪಗೆರಿ ಜಲಾಶಯ. ಇದು ಒಂದೂವರೆ ತಿಂಗಳ ಹಿಂದೆಯೇ ಖಾಲಿಯಾಗಿತ್ತು. ಪರಿಣಾಮ ಪುರಸಭೆ ವ್ಯಾಪ್ತಿಯ ಒಂದಷ್ಟು ಕೊಳವೆ ಬಾವಿ ಮತ್ತು ಜಲಾಶಯದಲ್ಲಿ ಅಳಿದುಳಿದ ನೀರನ್ನೇ ಪಂಪ್‌ ಸೆಟ್‌ನಿಂದ ಎತ್ತಿ ಕುಡಿಯಲು ಪೂರೈಸಲಾಗಿತ್ತು.

ಹೀಗಾಗಿ ರಾಡಿ ನೀರು, ಕೊಳವೆ ಬಾವಿ ಸವಳು ನೀರು ಕುಡಿವ ದುರ್ಗತಿಗೆ ಜನತೆ ರೋಷಿ ಹೋಗಿದ್ದರು. ಪುರಸಭೆ ತಹಶೀಲ್ದಾರ್‌ ಮೂಲಕ 3 ಬಾರಿ ಜಿಲ್ಲಾ ಧಿಕಾರಿಗೆ ಕಾಲುವೆ ನೀರು ಹರಿಸುವಂತೆ ಪತ್ರ ರವಾನಿಸಿತ್ತು. ಈ ಮಧ್ಯೆ ಶಾಸಕ ಸಿ.ಸಿ. ಪಾಟೀಲ ಕೂಡ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಿ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಒತ್ತಡ ಹೇರಿದ್ದರು.

ಪ್ರತಿ 15 ದಿನಕ್ಕೊಮ್ಮೆ ಕುಡಿವ ನೀರು ಪಡೆಯುತ್ತಿದ್ದ ಪಟ್ಟಣದ ಜನತೆ ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಹೇಗೋ ಕೆಂಪಗೆರಿ ಜಲಾಶಯಕ್ಕೆ ಕಾಲುವೆ ನೀರು ಸೇರುತ್ತಿರುವುದು ಜನತೆ ನಿರಾಳವಾಗುವಂತಾಗಿದೆ. ಆರೇಳು ತಿಂಗಳಿಗೆ ಸಾಕಾಗುವಷ್ಟು ನೀರು ಕೆರೆಯಲ್ಲಿ ಸಂಗ್ರಹವಾಗುವ ನಿರೀಕ್ಷೆ ಕಂಡು ಬಂದಿದೆ.

Advertisement

ಅಡ್ಡಗಟ್ಟಿ ನೀರು: ನವಿಲುತೀರ್ಥ ರೇಣುಕಾ ಜಲಾಶಯದಿಂದ ಕಾಲುವೆಗೆ ನೀರು ಬಿಡಲಾಗಿದ್ದು, ಮಲಪ್ರಭಾ ಕಾಲುವೆಯಿಂದ ಸೋಮಾಪುರ ಕಾಲುವೆ ಮೂಲಕ ಕೆರೆಗೆ ನೀರು ಸೇರುತ್ತಿದೆ. ಹೀಗಾಗಿ ಸೋಮಾಪುರ ಕಾಲುವೆ ಗೇಟ್‌ ಬಳಿ ಮಲಪ್ರಭಾ ಶಾಖಾ ಕಾಲುವೆ ಮಣ್ಣಿನಿಂದ ಅಡ್ಡಗಟ್ಟಿ ನೀರು ತಿರುವಿಕೊಳ್ಳಲಾಗಿದೆ. ಪುರಸಭೆ ಕಾವಲುಗಾರರನ್ನು ನೇಮಿಸಿದೆ.

10 ದಿನ ಲಭ್ಯ: ಕೆಂಪಗೆರಿ ಜಲಾಶಯ ತುಂಬಿಸಲು ಆ.7ರಿಂದ 10 ದಿನ ಅಂದರೆ ಆ.16ರವರೆಗೆ ಕಾಲುವೆಗೆ ದಿನಕ್ಕೆ 300 ಕ್ಯುಸೆಕ್‌ ನೀರು ಬಿಡಲಾಗಿದೆ. ಕಾಲುವೆ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಪುರಸಭೆಯಿಂದ ಮೂರು ಸಿಬ್ಬಂದಿ ತಂಡ ರಚಿಸಲಾಗಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಕಾಲುವೆ ನೀರು ಸಮರ್ಪಕವಾಗಿ ಜಲಾಶಯ ಸೇರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾರಾಯಣ ಪೇಂಡ್ಸೆ ತಿಳಿಸಿದರು.

ಆರು ತಿಂಗಳ ನಿರೀಕ್ಷೆ
ಕೆಂಪಗೆರಿ ಜಲಾಶಯ 19 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾಲುವೆಗೆ ಹರಿಸಿದ ನೀರು ಸಮರ್ಪಕವಾಗಿ 10 ದಿನಗಳು ಜಲಾಶಯ ಸೇರಿದರೆ ಸುಮಾರು 16 ಅಡಿ ನೀರು ಸಂಗ್ರಹಿಸಿಕೊಳ್ಳಬಹುದು. ಮೇಲಾಗಿ 16 ಅಡಿ ಮಾತ್ರ ಸಂಗ್ರಹಕ್ಕೆ ಅವಕಾಶ ಇದೆ. ಕಾರಣ ಹೆಚ್ಚು ನೀರು ಸಂಗ್ರಹವಾದರೆ ಜಲಾಶಯದಲ್ಲಿ ಸೋರಿಕೆ ಉಂಟಾಗುತ್ತದೆ ಎಂಬುದು ಅಧಿಕಾರಿಗಳ ನಿಲುವು.

ರೈತರು ಸಹಕರಿಸಲಿ
ನರಗುಂದ ಪಟ್ಟಣಕ್ಕೆ ಕುಡಿವ ನೀರಿಗಾಗಿ ಕಾಲುವೆಗೆ ನೀರು ಬಿಡಲಾಗಿದೆ. ಕಾಲುವೆ ಮೇಲ್ಭಾಗದ ರೈತರು ಕಾಲುವೆ ನೀರು ಬಳಸಿಕೊಳ್ಳದಂತೆ ಸಹಕರಿಸಬೇಕು.
ನಾರಾಯಣ ಪೇಂಡ್ಸೆ, ಪುರಸಭೆ ಮುಖ್ಯಾಧಿಕಾರಿ

ಸಿದ್ಧಲಿಂಗಯ್ಯ ಮಣ್ಣೂರಮಠ 

Advertisement

Udayavani is now on Telegram. Click here to join our channel and stay updated with the latest news.

Next