ಕುಳಗೇರಿ ಕ್ರಾಸ್: ಮಳೆ ಕಡಿಮೆಯಾದರೂ ಮಲಪ್ರಭಾ ಪ್ರವಾಹದ ನೀರು ಮಾತ್ರ ನದಿಯಂಚಿನ ಗ್ರಾಮಕ್ಕೆ ಬಂದು ತಲುಪಿದ್ದು ಜನರಲ್ಲಿ ಭೀತಿ ಶುರುವಾಗಿದೆ. ಸದ್ಯ ತಳಕವಾಡ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಹಾಗೂ ಗೋವನಕೊಪ್ಪ ಬನಶಂಕರಿ ದೇವಸಾಥನದ ಹತ್ತಿರ ಮಲಪ್ರಭಾ ಪ್ರವಾಹದ ನೀರು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಕರ್ಲಕೊಪ್ಪ, ಹಾಗನೂರು, ಆಲೂರು ಎಸ್‌ಕೆ, ಬೀರನೂರು, ಕಳಸ, ಕಿತ್ತಲಿ ಹೀಗೆ ಹಲವಾರು ಗ್ರಾಮಗಳಿಗೆ ಪ್ರವಾಹದ ಭೀತಿ ಶುರುವಾಗಿದೆ. ಮಲಪ್ರಭಾ ಮಹಾ ಮಂಡಳಿ ಕಾಡಾ ಉಪಾಧ್ಯಕ್ಷ ನಾಗಪ್ಪ ಅಡಪಟ್ಟಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದ ನೀರು ವೀಕ್ಷಿಸಿ ರೈತರನ್ನು ವಿಚಾರಿಸಿದರು.
ನಂತರ ಮಾತನಾಡಿದ ರೈತರು, ಇಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ. ಸುಮಾರು ವರ್ಷಗಳಿಂದ ನಮಗೆ ಪ್ರವಾಹ ಬರುತ್ತಲೇ ಇದೆ. ರೈತರಿಗೆ ಸರ್ಕಾರದ ಪರಿಹಾರ ಮಾತ್ರ ಮರೀಚಿಕೆಯಾಗಿದೆ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.
ಮಲಪ್ರಭಾ ನದಿ ದಡದಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳಿಗೆ ಸುಮಾರು ವರ್ಷಗಳಿಂದ ಪರಿಹಾರವೇ ಕೊಟ್ಟಿಲ್ಲ. ಗ್ರಾಮಗಳಲ್ಲಿ ಸಾಕಷ್ಟು ಮಣ್ಣಿನ ಮನೆಗಳು ಬಿದ್ದಿವೆ. ಇನ್ನೂ ಕೆಲವರಿಗೆ ಮನೆಗಳನ್ನೇ ಕೊಟ್ಟಿಲ್ಲ. ಹೀಗೆ ಹಲವಾರು ಸಮಸ್ಯೆಗಳಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದರು.
ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ನಿರಂತರ ಹರಿದು ಬರುತ್ತಿದೆ. ಮಲಪ್ರಭಾ ಅಕ್ಕ-ಪಕ್ಕ ಹೊಲಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ಜಲಾವೃತಗೊಂಡಿವೆ. ವಾರದಿಂದ ನೀರಲ್ಲಿ ಮುಳುಗಿದ ಬೆಳೆಗಳು ಕೊಳೆಯುವ ಸ್ಥಿತಿಗೆ ತಲುಪಿದ್ದು, ರೈತರು ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.