ಮೈಸೂರು: ಪೊಲೀಸರು ತಮ್ಮ ಒತ್ತಡದ ಬದುಕಿನಿಂದ ಹೊರಬರಲು ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ ಎಂದು ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಬಿ.ಎನ್.ಎಸ್. ರೆಡ್ಡಿ ಅಭಿಪ್ರಾಯಪಟ್ಟರು. ಮೈಸೂರು ನಗರ ಪೊಲೀಸ್ ವತಿಯಿಂದ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಿಂದ ಒತ್ತಡ ದೂರ: ದಿನಬೆಳಗಾದರೆ ಕೆಲಸ, ರಾತ್ರಿ ಮನೆ ಇಷ್ಟಕ್ಕೆ ಬದುಕು ಸೀಮಿತ ಆಗಬಾರದು. ಪೊಲೀಸರಿಗೆ ಕೆಲಸದ ಒತ್ತಡ, ಸಂಸಾರದ ಒತ್ತಡ ಸೇರಿದಂತೆ ಮನೆಯ ಜವಾಬ್ದಾರಿ ನಿಬಾಯಿಸುವುದು ಸೇರಿದಂತೆ ಅನೇಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಈ ಒತ್ತಡ ಬದುಕಿನಿಂದ ಹೊರಬರಲು ಕ್ರೀಡೆ ಸಹಕಾರಿಯಾಗಿದೆ. ಯಾವುದಾದರು ಒಂದು ಕ್ರೀಡಾ ಚಟುವಟಿಕೆಯಲ್ಲಿ ನಾವು ತೊಡಗಿಸಿಕೊಂಡರೆ ನೆಮ್ಮದಿ, ಆರೋಗ್ಯ ಮತ್ತು ಸ್ಪೂರ್ತಿ ಸಿಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಮಸ್ತ ಪೊಲೀಸರು ಕ್ರೀಡೆಯನ್ನು ರಕ್ತಗತವನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
45 ನಿಮಿಷ ವ್ಯಾಯಾಮ ಮಾಡಿ: ಪ್ರತಿದಿನ ಬೆಳಗ್ಗೆ 45 ನಿಮಿಷ ಯಾವುದಾದರು ಒಂದು ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಆರೋಗ್ಯವಾಗಿರುವುದರ ಜೊತೆಗೆ ದಿನವಿಡೀ ಸಂತೋಷದಿಂದ ಹಸನ್ಮುಖೀಯಾಗಿರಬಹುದು. ಜೊತೆಗೆ ಪೊಲೀಸರೆಂದರೆ ಭಯ ಪಡುವ ವಾತಾವರಣವನ್ನು ನಿವಾರಿಸಬೇಕು. ಠಾಣೆಗೆ ಬರುವ ಜನರೊಟ್ಟಿಗೆ ಸೌಜನ್ಯದಿಂದ ವರ್ತಿಸುವ ಮನೊಭಾವ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕ್ರೀಡಾ ಸ್ಪೂರ್ತಿ ಅಗತ್ಯ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಕ್ರೀಡಾ ಸ್ಪೂರ್ತಿ ಅಗತ್ಯ. ನಾವು ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ. ಇದರಿಂದ ಪೊಲೀಸ್ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಹುದು. ಪೊಲೀಸರು ದುಶ್ಚಟಗಳಿಂದ ದೂರವಿರುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಧೂಮಪಾನ, ಮದ್ಯಪಾನದಿಂದ ದೂರವಿದ್ದರೆ ಹೆಚ್ಚು ಕಾಲ ಆರೋಗ್ಯದಿಂದ ಬಹುಕಬಹುದು ಎಂದರು.
ಗಣ್ಯರಿಗೆ ಗೌರವ: ಇದಕ್ಕೂ ಮುನ್ನಾ ಸಿಎಆರ್, ಎನ್‌ಆರ್, ದೇವರಾಜ, ಕೆ.ಆರ್., ಸಂಚಾರ, ಮಹಿಳಾ, ವಿಶೇಷ ಪಡೆ, ಕೆಎಆರ್‌ಪಿ ಮೌಂಟೆಡ್ ವಿಭಾಗಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಸದಾ ಕಲಾ ಒತ್ತಡ ಜೀವನ ಕಳೆಯುವ ಪೊಲೀಸರು ತಮಗಾಗಿ ಆಯೋಜಿಸಿದ್ದ ಕ್ರೀಡಾಕೂಟದ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕ್ರೀಡಾಟಕೂಟವು ಡಿ.8 ರವರೆಗೆ ನಡೆಯಲಿದ್ದು, ನಗರದ ಸಿಎಆರ್ ವಿಭಾಗ, ಎ.ಆರ್., ದೇವರಾಜ, ಕೃಷ್ಣರಾಜ, ಕೆಎಸ್‌ಆರ್‌ಪಿ, ವಿಶೇಷ ಪಡೆ, ಮಹಿಳಾ ವಿಭಾಗದ ಪೊಲೀಸ್ ಸಿಬ್ಬಂದಿ ಭಾಗವಹಿಸಲಿದ್ದಾರೆ. ಹಗ್ಗ ಜಗ್ಗುವ ಸ್ಪರ್ಧೆ, 100, 200, 400, 1500 ಮೀ.ಓಟ, ರಿಲ್ಲೆ ಓಟ, ಉದ್ದ ಜಿಗಿತದ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಲಿವೆ.
ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತುರಾಜ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕವಿತಾ, ಸಿಎಆರ್ ಉಪ ಆಯುಕ್ತ ಚೆನ್ನಯ್ಯ ಸೇರಿದಂತೆ ಮತ್ತಿತರರು ಇದ್ದರು.