Advertisement

ಶಾಲೆ ವಿಲೀನ ಮಾಡಿ

10:09 AM Jan 12, 2020 | mahesh |

ಬೆಂಗಳೂರು: ಒಂದು ಶಾಲೆಯಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದರೆ ಅವರನ್ನು ಸಮೀಪದ ಮತ್ತೂಂದು ಶಾಲೆಗೆ ಸೇರ್ಪಡೆ ಮಾಡುವ ಸಲಹೆಯನ್ನು ರಾಜ್ಯ ಯೋಜನಾ ಮಂಡಳಿ ಸರಕಾರದ ಮುಂದಿಟ್ಟಿದೆ.

Advertisement

ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಿಗೆ ಹೊಸದಾಗಿ ಶಿಕ್ಷಕರನ್ನು ನೇಮಿಸುವುದು ತ್ರಾಸದಾಯಕ. ಹೀಗಾಗಿ ಒಂದು ಪಂಚಾಯತ್‌ ವ್ಯಾಪ್ತಿಯಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಐದಾರು ಶಾಲೆಗಳ ಮಕ್ಕಳನ್ನು ಒಂದು ಪಬ್ಲಿಕ್‌ ಶಾಲೆಗೆ ಸೇರಿಸಿದರೆ ಕನಿಷ್ಠ 40ರಿಂದ 50 ಮಕ್ಕಳು ಒಂದೇ ಶಾಲೆಗೆ ಸೇರಿದಂತಾಗುತ್ತದೆ. ಆ ಮಕ್ಕಳಿಗೆ ಶಾಲೆಗೆ ತೆರಳಲು ಸರಕಾರವೇ ವಾಹನ ವ್ಯವಸ್ಥೆ ಕಲ್ಪಿಸುವಂತೆ ಸರಕಾರಕ್ಕೆ ಸಲಹೆ ನೀಡಲಾಗಿದೆ. ಇದರಿಂದ ಸರಕಾರಕ್ಕೆ ವೆಚ್ಚವೂ ಕಡಿಮೆಯಾಗುವುದಲ್ಲದೆ ಶಿಕ್ಷಣದ ಗುಣಮಟ್ಟವೂ ಹೆಚ್ಚಾಗುತ್ತದೆ ಎಂದು ಮಂಡಳಿ ಶಿಫಾರಸು ಮಾಡಿದೆ. ಬಜೆಟ್‌ ಪೂರ್ವಭಾವಿಯಾಗಿ ವಿವಿಧ ಇಲಾಖೆ ಗಳ ಅಧಿಕಾರಿಗಳ ಜತೆಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಈ ಮಾಹಿತಿ ನೀಡಿದರು.

ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಶೇ. 68.86ರಷ್ಟಿದ್ದು, ನಗರ ಪ್ರದೇಶದಲ್ಲಿ ಶೇ. 86.21ರಷ್ಟಿದೆ. 1ರಿಂದ 10ನೇ ತರಗತಿಯವರೆಗೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಸರಾಸರಿ ಶೇ. 26.18ರಷ್ಟಿದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಶಿಕ್ಷಣ ಇಲಾಖೆಗೆ ಸಲಹೆ ನೀಡಲಾಗಿದೆ ಎಂದರು.

ವಿವಿಧ ಇಲಾಖೆಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಶಿಕ್ಷಣ ಇಲಾಖೆಯ ಅಡಿಯಲ್ಲಿ ವಿಲೀನಗೊಳಿಸುವುದು. ಎಲ್ಲ ಶಾಲೆಗಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡುವುದು. ಮಧ್ಯಾಹ್ನದ ಬಿಸಿಯೂಟಕ್ಕೆ ಸಿರಿಧಾನ್ಯ, ರಾಗಿ, ದ್ವಿದಳ ಧಾನ್ಯಯುಕ್ತ ಆಹಾರ, ಸೊಪ್ಪು, ಉಪ್ಪಿನಕಾಯಿ, ನೆಲ್ಲಿಕಾಯಿ ನೀಡುವುದು. ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಕೈತೋಟ ಬೆಳೆಸಲು ಸಲಹೆ ನೀಡಲಾಗಿದೆ.

ವಿಷನ್‌ 2020
ಬಿ.ಎಸ್‌. ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವಿಷನ್‌ 2020 ಯೋಜನೆಯನ್ನು ರೂಪಿಸಿದ್ದರು. ಅನಂತರ ಬಂದ ಸರಕಾರಗಳು ಅದನ್ನು ಎಷ್ಟರ ಮಟ್ಟಿಗೆ ಸಾಕಾರಗೊಳಿಸಿವೆ ಎನ್ನುವುದನ್ನು ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಸುಸ್ಥಿರ ಅಭಿವೃದ್ಧಿ ವಿಷಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದ್ದು, 2018-19ರಲ್ಲಿ 7ನೇ ಸ್ಥಾನದಲ್ಲಿತ್ತು. 19-20ರಲ್ಲಿ ಒಂದು ಸ್ಥಾನ ಏರಿಕೆ ಕಂಡಿದೆ. 2021ರಲ್ಲಿ 3ನೇ ಸ್ಥಾನಕ್ಕೆ ಬರುವ ಗುರಿ ಹೊಂದಲಾಗಿದೆ ಎಂದರು.  ಉದ್ಯಮ, ಸಂಶೋಧನೆ ಹಾಗೂ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೀರ ಹಿಂದುಳಿದಿದ್ದು, 5ನೇ ಸ್ಥಾನದಿಂದ 21ಕ್ಕೆ ಇಳಿಕೆಯಾಗಿದೆ ಎಂದರು.

Advertisement

ಬಡವರ ಬಂಧು ಬದಲಾವಣೆ
ಮೈತ್ರಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಬಡವರ ಬಂಧು ಯೋಜನೆಯನ್ನು ಬದಲಾಯಿಸಲು ಮಂಡಳಿ ಸೂಚನೆ ನೀಡಿದೆ. ಪ್ರತಿದಿನ ಸಾಲ ನೀಡಿ ವಾಪಸ್‌ ಪಡೆಯುವ ವ್ಯವಸ್ಥೆಯನ್ನು ಬದಲಾಯಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಸಾಲ ನೀಡಿ, ಸಾಲ ಪಡೆದವರು ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಅವರಿಗೆ ಶೇ. 10ರಷ್ಟು ಸಾಲದ ಪ್ರಮಾಣವನ್ನು ಹೆಚ್ಚಿಸಲು ಅವಕಾಶವಿರುವಂತೆ ಯೋಜನೆಯನ್ನು ಬದಲಾಯಿಸಲು ಸೂಚಿಸಲಾಗಿದೆ.

ಹಸಿವಿನ ಪ್ರಮಾಣ ಹೆಚ್ಚು
ಅನ್ನಭಾಗ್ಯ ಯೋಜನೆ ಬಳಿಕವೂ ರಾಜ್ಯದಲ್ಲಿ ಹಸಿವಿನ ಪ್ರಮಾಣ ಹೆಚ್ಚಾಗಿದೆ. ಬಡತನ ಪ್ರಮಾಣ ಶೇ. 3ರಷ್ಟು ಹೆಚ್ಚಾಗಿರುವುದು ರಾಜ್ಯ ಯೋಜನಾ ಮಂಡಳಿ ನಡೆಸಿರುವ ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಅನ್ನಭಾಗ್ಯಯೋಜನೆ ಜಾರಿಗೊಳಿಸಿದ್ದರೂ ಹಸಿವಿನ ಪ್ರಮಾಣ 2018ರಲ್ಲಿ ಶೇ. 13ರಷ್ಟಿತ್ತು ಈ ವರ್ಷ ಶೇ. 17ಕ್ಕೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಶೇ. 3ರಷ್ಟು ಹೆಚ್ಚಳವಾಗಿದೆ. ಬಡತನ ಪ್ರಮಾಣ 2018ರಿಂದ 2019ರಲ್ಲಿ ಶೇ. 19ರಿಂದ 16ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.

ಮಂಡಳಿ ಸಲಹೆಗಳು
 ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ
 ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ
 ಕೃಷಿ ಉತ್ಪನ್ನಗಳ ಸಂಸ್ಥೆ ಸ್ಥಾಪನೆ
 ಬಡವರ ಬಂಧು ಯೋಜನೆಯಲ್ಲಿ ಬದಲಾವಣೆಗೆ ಶಿಫಾರಸು
 ಮಾತೃಭಾಗ್ಯ ಯೋಜನೆ ಸಕಾಲದಲ್ಲಿ ತಲುಪಿಸಲು ಕ್ರಮ.

Advertisement

Udayavani is now on Telegram. Click here to join our channel and stay updated with the latest news.

Next