ಯಳಂದೂರು: ಈಚೆಗೆ ಪುಸ್ತಕ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ. ಓದಿನ ಕಡೆ ಆಸಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು ಎಂದು ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ವಿ.ಪುಷ್ಪಕುಮಾರ್ ಸಲಹೆ ನೀಡಿದರು. ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಣ ಜಾಣೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಕಾಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯದ ಗೀಳು ಹಚ್ಚಿಕೊಂಡವರು ಪ್ರಜ್ಞಾವಂತರಾಗುತ್ತಾರೆ. ಓದುವ ಅಭಿರುಚಿಯಿಂದ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಪುಸ್ತಕ ಖರೀದಿ ಮಾಡುವುದರಿಂದ ಪ್ರಕಾಶನ ಸಂಸ್ಥೆಗಳಿಗೂ ಲಾಭವಾಗುವುದರಿಂದ ಉತ್ತಮ ಪುಸ್ತಕ ಹೊರತರಲು ಸಾಧ್ಯವಾಗುತ್ತದೆ. ಜೊತೆಗೆ ಉದಯೋನ್ಮೊಖ ಲೇಖಕರನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಚ್.ಎಸ್. ಪದ್ಮಾ ಮಾತನಾಡಿ, ಈಚೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಭರಾಟೆ ಜೋರಾಗಿದೆ. ಅವುಗಳ ರಭಸಕ್ಕೆ ಪುಸ್ತಕ ಪ್ರಿಯರ ಸಂಖ್ಯೆ ಕುಗ್ಗಿದೆ. ಆದರೆ ಓದಿನಿಂದ ಪಡೆಯುವ ಜ್ಞಾನ ಸ್ಮತಿಪಟಲದಲ್ಲಿ ಹೆಚ್ಚು ಕಾಲ ಉಳಿಯುತ್ತದೆ. ಸಾಹಿತ್ಯವನ್ನು ಓದುವ ಬರೆಯುವ ಹವ್ಯಾಸವನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ನಮ್ಮ ಬರವಣಿಗೆಗಳು ಪ್ರಕಟಗೊಂಡರೆ ನಮಗೆ ಇನ್ನಷ್ಟು ಸ್ಫೂರ್ತಿ ಬರುವ ಜೊತೆಗೆ ಜಗತ್ತಿಗೆ ನಮ್ಮ ಪರಿಚಯವಾಗುತ್ತದೆ. ಈ ಹವ್ಯಾಸ ನಮ್ಮನ್ನು ಜಾಗೃತ ಸ್ಥಿತಿಯಲ್ಲಿ ಇಡುತ್ತದೆ.
ಹಾಗಾಗಿ ಓದುವ ಹಾಗೂ ಬರೆಯುವ ಹವ್ಯಾಸಗಳನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಂಬಾ ಪ್ರಕಾಶನದ ಭಾನುಪ್ರಕಾಶ್ ಮಾತನಾಡಿ, ಪ್ರಕಾಶಕರಿಗೆ ಓದುಗರನ್ನು ಹುಡುಕುವುದೇ ದುಸ್ತರವಾಗಿದೆ. ಪುಸ್ತಕ ಅಚ್ಚು ಹಾಕಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆ ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆಗಳೂ ದುಬಾರಿಯಾಗಿದೆ. ಇಷ್ಟೆಲ್ಲಾ ಕಷ್ಟಪಟ್ಟು ಅಚ್ಚು ಹಾಕಿಸಿದ ಪುಸ್ತಕಕ್ಕೆ ಓದುಗ ಸಿಗದಿದ್ದಾಗ ಪ್ರಕಾಶಕ ಹಾಗೂ ಲೇಖಕನಿಗೆ ನಿರಾಸೆ ಹಾಗೂ ನಷ್ಟವಾಗುತ್ತದೆ.
ಹೀಗಾಗಿಯೇ ರಾಜ್ಯದಲ್ಲಿ ಪ್ರಕಾಶನ ಸಂಸ್ಥೆಗಳ ಸಂಸ್ಥೆ ಕಡಿಮೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಪುಸ್ತಕಗಳು ಸಂಗಾತಿಯಾಗಬೇಕು ವ್ಯಾಸಂಗದ ಅವಧಿಯಲ್ಲಿ ಕಲಿಕೆ ನಿರಂತರವಾಗಿರಬೇಕು. ಪಠ್ಯದ ಜೊತೆಗೆ ಇತರೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕರಾದ ಪ್ರಕಾಶ್‌ಮೂರ್ತಿ, ಶಿವರುದ್ರಪ್ಪ, ಹೇಮಂತ್‌ಕುಮಾರ್, ಗಣೇಶ್‌ಪ್ರಸಾದ್ ಇತರರು ಇದ್ದರು.