Advertisement

ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿ

09:39 PM Apr 02, 2019 | Lakshmi GovindaRaju |

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ದೇಶದ ಪ್ರಧಾನಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ತಿಳಿಸಿದರು. ನಗರದ ಬಿಬಿ ರಸ್ತೆಯಲ್ಲಿರುವ ಎಸ್‌ಎಲ್‌ಎನ್‌ ಅಶ್ವತ್ಥ್ನಾರಾಯಣ್‌ ಅವರ ಜಾಗದಲ್ಲಿ ತಾಲೂಕು ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಮೊಯ್ಲಿ ಸುಳ್ಳು ಭರವಸೆ: ಎತ್ತಿನಹೊಳೆ ಯೋಜನೆಗೆ ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ 6 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ತಮ್ಮನ್ನು ಆಯ್ಕೆ ಮಾಡಿದರೆ ಕುಡಿಯುವ ನೀರಿನ ಯೋಜನೆಗಳಾದ ಕೃಷ್ಣಾ ನದಿ, ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಂದ ಈ ಭಾಗಗಳಿಗೆ ನೀರು ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಈ ಹಿಂದೆ ನಡೆದ ಚುನಾವಣೆಯಲ್ಲಿ ತ್ರಿಕೋಣ ಸ್ಪರ್ಧೆ ಇತ್ತು. ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ. ಎರಡು ಬಾರಿ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿದ್ದೀರಿ. ಆದರೆ, ಅವರು ಏನನ್ನೂ ಮಾಡಿಲ್ಲ. ಪ್ರತಿ ಚುನಾವಣೆಯಲ್ಲೂ ನೀರು ತರುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಾರೆ. ಚುನಾವಣೆಗಳಲ್ಲಿ ಮತಕ್ಕಾಗಿ ಜನರನ್ನು ದಿಕ್ಕು ತಪ್ಪಿಸುತ್ತಾರೆ. ಈ ಬಾರಿ ನನಗೆ ಮತ ನೀಡಿ ಮೋದಿ ಜೊತೆಯಲ್ಲಿ ಸಂಸತ್ತಿಗೆ ಹೋಗಲು ಅವಕಾಶ ನೀಡಿದರೆ ಕೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಯುವಕರಿಗೆ ಉದ್ಯೋಗ: ವೀರಪ್ಪ ಮೊಯ್ಲಿ ಅವರ 10 ವರ್ಷಗಳ ಸಾಧನೆ ಶೂನ್ಯವಾಗಿದೆ. ಕೇತ್ರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗಬೇಕು ಹಾಗೂ ಯುವಕರಿಗೆ ಉದ್ಯೋಗ ಸಿಗಬೇಕು. ಎತ್ತಿನಹೊಳೆ ಯೋಜನೆ ತ್ವರಿತವಾಗಿ ಪೂರ್ಣಗೊಳ್ಳಬೇಕು. ಜನತೆ ದೇಶದ ಸುರಕ್ಷತೆಯ ದೃಷ್ಟಿಯಿಂದ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಕಲಿ ಗಾಂಧಿಗಳ ಹೆಸರಲ್ಲಿ ದೇಶ ಲೂಟಿ: ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಗ್ರಾಪಂ ಸದಸ್ಯನಿಗೆ ಇರುವ ಜ್ಞಾನವೂ ಇಲ್ಲ. ನೆಹರು ಅವರಿಂದ ಈಗಿನ ವರೆಗೂ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣ ಮಾಡುವವರಲ್ಲ. ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಯಾರೂ ಮರಳಾಗುವುದಿಲ್ಲ. ಬೇಲ್‌ ಮೇಲೆ ಇರುವವರು ಹೊರಗಡೆ ಓಡಾಡುತ್ತಾ ನಕಲಿ ಗಾಂಧಿಗಳ ಹೆಸರಲ್ಲಿ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಕಿಡಿಕಾಡಿದರು.

Advertisement

ಸತ್ಯಕ್ಕೇ ಜಯ ಖಚಿತ: ರಾಹುಲ್‌ ಗಾಂಧಿ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಂಗ್ರೆಸ್‌ನವರು ಕತ್ತಲ್ಲಲ್ಲಿ ಕಲ್ಲು ಹೊಡೆದು ಓಡಿಹೋಗುವಂತಹವರು. 1,810 ಕೋಟಿ ರೂ.ಡೈರಿ ವಿಚಾರ ಸುಳ್ಳು ಎಂದು ತೆರಿಗೆ ಇಲಾಖೆ ಐಟಿ ಮುಖ್ಯಸ್ಥರೇ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಹುಲ್‌ ಗಾಂಧಿ ಕೈಯಲ್ಲಿ ಈ ವಿಚಾರವನ್ನು ಬರೆದುಕೊಟ್ಟು ಹೇಳಿಸುತ್ತಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಯಾವತ್ತೂ ಸಹ ಸುಳ್ಳು ಸುಳ್ಳಾಗಿರುತ್ತದೆ. ಸತ್ಯಕ್ಕೆ ಎಂದೂ ಜಯ ಸಿಗುತ್ತದೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌ಎಲ್‌ಎನ್‌ ಅಶ್ವತ್ಥನಾರಾಯಣ್‌, ರಾಜ್ಯ ಪರಿಷತ್‌ ಸದಸ್ಯ ದೇಸು ನಾಗರಾಜ್‌, ರಾಜ್ಯ ಮುಖಂಡ ಗೋಪಾಲ್‌ಗೌಡ, ಜಿಲ್ಲಾ ಕಾರ್ಯದರ್ಶಿ ರಮೇಶ್‌ ಬಾಬು, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಸಿ.ಮುನಿರಾಜು, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಮಾರೇಗೌಡ,

ಹೊಸಕೋಟೆ ತಾಲೂಕು ಉಪಾಧ್ಯಕ್ಷ ಸುಬ್ಬರಾಜು, ರೈತ ಮೋರ್ಚಾ ತಾಲೂಕು ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಗೋಕರೆ ಗೋಪಾಲ್‌, ಪ್ರಧಾನ ಕಾರ್ಯದರ್ಶಿ ವೆಂಕಟೇ ಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗವೇಣಿ, ಪ್ರಧಾನ ಕಾರ್ಯದರ್ಶಿ ವಿಮಲಾ, ಸದಸ್ಯರಾದ ಗೀತಾ ಜಗದೇವ, ಟೌನ್‌ ಬಿಜೆಪಿ ಅಧ್ಯಕ್ಷ ಮಂಜುನಾಥ್‌, ಜಿಲ್ಲಾ ಮಾಧ್ಯಮ ಪ್ರಮುಖ್‌ ಎಸ್‌.ರಮೇಶ್‌ಕುಮಾರ್‌, ಯುವ ಮೋರ್ಚಾ ಅಧ್ಯಕ್ಷ ಆನಂದ್‌ಗೌಡ, ಚನ್ನರಾಯಪಟ್ಟಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಮಾಂಜನೇಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next