ನೆಲಮಂಗಲ: ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಉತ್ತಮ ಸೌಲಭ್ಯ ನೀಡುವ ಮೂಲಕ ವಿದ್ಯಾರ್ಥಿಗಳ ಯಶಸ್ವಿಗೆ ಮುಂದಾಗಿವೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸಲಹೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದ್ದ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು. ಸರ್ಕಾರಗಳು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆ ಜಾರಿಗೆ ತರುವ ಮೂಲಕ ವಿಶೇಷ ಸೌಲಭ್ಯ ನೀಡುತ್ತಿದೆ. ಅದೇ ರೀತಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆ ಪಡೆಯುವುದಲ್ಲದೆ ಮಾನಸಿಕವಾಗಿ ಸದೃಢವಾಗಿರುತ್ತಾರೆಂದರು.
ಲ್ಯಾಪ್‌ಟಾಪ್ ವಿತರಣೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ, ಬಿಎಸ್ಸಿ ಬಿಎ ವಿಭಾಗದ 278 ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.
6 ತಿಂಗಳು ತಡವಾಗಿ ವಿತರಣೆ: ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡುವಂತೆ ಸರ್ಕಾರ ಮಾರ್ಚ್ ತಿಂಗಳ ಮೊದಲೇ ತಿಳಿಸಿ ಲ್ಯಾಪ್‌ಟಾಪ್ ಸರಬರಾಜು ಮಾಡಿತ್ತು. ಆದರೆ, ಶಾಸಕರು ಕಾಲೇಜಿಗೆ ಬರಲು ಕೋವಿಡ್ ನೆಪ ಹಾಗೂ ಕಾಲೇಜು ಸ್ಥಗಿತ ಮಾಡಿದ ಹಿನ್ನೆಲೆ 6 ತಿಂಗಳ ನಂತರ ವಿದ್ಯಾರ್ಥಿಗಳಿಗೆ ಶಾಸಕರ ಸಮ್ಮುಖದಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದ್ದು ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಬಾಲಕೃಷ್ಣಯ್ಯ, ಎನ್‌ಪಿಎ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ನಗರಸಭೆ ಸದಸ್ಯ ನರಸಿಂಹಮೂರ್ತಿ, ಪುರಸಭೆ ಮಾಜಿ ಸದಸ್ಯ ಪಿಳ್ಳಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಭೀಮರಾಜು, ಎನ್ ಎಸ್‌ಎಸ್ ಮುಖ್ಯಸ್ಥೆ ಡಾ.ಪುಷ್ಪಾ, ಪ್ರೊ.ಮಂಜಪ್ಪ, ಡಾ.ಪ್ರಮೀಳಾ. ಡಾ.ತೋಪೇಶ್ ,ಹನುಮಂತರಾಜು, ಪ್ರೊ.ಶ್ರೀನಿವಾಸ್, ಅಂಜನ್ ಕುಮಾರ್, ಪ್ರೊ.ಗಾಯಿತ್ರಿ, ಗ್ರಂಥಪಾಲಕ ಸಂತೋಷ್‌ಕುಮಾರ್ ಇದ್ದರು.