Advertisement
ಇತ್ತೀಚಿನ ದಿನಗಳಲ್ಲಿ ಕೆಲವು ಅನರ್ಹರು ವಸತಿ ಯೋಜನೆಯಡಿ ವಸತಿ ಮಂಜೂರು ಮಾಡಿಸಿಕೊಂಡಿರುವುದು ಜಿ.ಪಂ. ಗಮನಕ್ಕೆ ಬಂದಿದೆ. ಅಂತಹವರನ್ನು ಗುರುತಿಸುವ ಅಭಿಯಾನವನ್ನು ಜಿ.ಪಂ. ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ಅಂತಹ ಅನರ್ಹ ಫಲಾನುಭವಿಗಳು ತುರ್ತಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು ಹಾಗೂ ಅಕ್ರಮ/ನಿಯಮ ಬಾಹಿರವಾಗಿ ಪಡೆದ ಅನುದಾನವನ್ನು ಕೂಡಲೇ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.ಅನರ್ಹರನ್ನು ಆಯ್ಕೆ ಮಾಡಿದ ಆರೋಪದಡಿ ಸಂಬಂಧಪಟ್ಟ ಗ್ರಾ.ಪಂ.ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರ ವಿರುದ್ಧವೂ ಶಿಸ್ತು ಕ್ರಮ ಜರಗಿಸಲಾಗುವುದು. ಆದರೆ ಅರ್ಹ ಫಲಾನುಭವಿಗಳು ಯಾವುದೇ ಆತಂಕಪಡುವ ಅಗತ್ಯವಿಲ್ಲ. 2005-06ರಿಂದ ವಸತಿ ಯೋಜನೆಗಳಡಿ ಆಯ್ಕೆಗೊಂಡಿರುವ ಎಲ್ಲ ಫಲಾನುಭವಿಗಳು 7 ದಿನಗಳೊಳಗೆ ಸಂಬಂಧಪಟ್ಟ ಗ್ರಾ.ಪಂ.ಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್‌ನ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದರು.
ಸರಕಾರದಿಂದ ವಿವಿಧ ವಸತಿ ಯೋಜನೆಗಳಡಿ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ಫಲಾನುಭವಿಯಾಗಿ ಆಯ್ಕೆಗೊಂಡ ಅನಂತರ ತುರ್ತಾಗಿ ಮನೆಯ ಕಾಮಗಾರಿ ಪ್ರಾರಂಭಿಸಬೇಕಾಗಿರುವುದು ಫಲಾನುಭವಿಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸರಿಯಾದ ಸಮಯದಲ್ಲಿ ಮನೆಯ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಸರಕಾರದ ಯೋಜನೆಯ ಅನುಷ್ಠಾನದಲ್ಲಿಯೂ ಸಹ ಹಿನ್ನಡೆಯುಂಟಾಗುತ್ತದೆ. ದ.ಕ. ಜಿಲ್ಲೆಯಲ್ಲಿ ವಸತಿ ಯೋಜನೆಗಳಡಿ 2015-16ರಿಂದ ಈವರೆಗೆ ಆಯ್ಕೆಗೊಂಡಿರುವ ಫಲಾನುಭವಿಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,025, ಬೆಳ್ತಂಗಡಿ ತಾಲೂಕಿನಲ್ಲಿ 1,431, ಮಂಗಳೂರು ತಾಲೂಕಿನಲ್ಲಿ 1,041, ಪುತ್ತೂರು ತಾಲೂಕಿನಲ್ಲಿ 612 ಹಾಗೂ ಸುಳ್ಯ ತಾಲೂಕಿನಲ್ಲಿ 351 ಹೀಗೆ ಒಟ್ಟು 4,460 ಫಲಾನುಭವಿಗಳು ಮನೆಯ ಕಾಮಗಾರಿಯನ್ನು ಈವರೆಗೆ ಪ್ರಾರಂಭ ಮಾಡಿರುವುದಿಲ್ಲ. ಅಂತಹ ಫಲಾನುಭವಿಗಳು ಇನ್ನು 10 ದಿನದೊಳಗೆ ಮನೆಯ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಅಂಥವರಿಗೆ ಮನೆಯ ಆವಶ್ಯಕತೆ ಇಲ್ಲವೆಂದು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.