Advertisement

ಉದ್ಯೋಗ ಖಾತ್ರಿ ಸದುಪಯೋಗ ಪಡಿಸಿಕೊಳ್ಳಿ: ಸಿಇಒ

09:31 AM Mar 16, 2019 | Team Udayavani |

ಕೂಡ್ಲಿಗಿ: ತಾಲೂಕಿನ ಆಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ
ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಪಂ ಸಿಇಒ ಕೆ.ನಿತೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಆಲೂರು ಗ್ರಾಮದ ರೈತ ದಿವಾಕರ್‌ರೆಡ್ಡಿ ಅವರ ಜಮೀನಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿದ್ದ ಕೃಷಿ ಹೊಂಡ ನಿರ್ಮಾಣದ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಕೆ.ನಿತೀಶ್‌, ಈ ಬಾರಿಯೂ ತಾಲೂಕಿನಲ್ಲಿ ಬರಗಾಲ ಎದುರಾಗಿದ್ದು,
ಈ ಬಗ್ಗೆ ಜನತೆ ಭಯಪಡುವ ಅಗತ್ಯವಿಲ್ಲ. ಎಲ್ಲರಿಗೂ ಸ್ಥಳೀಯ ಗ್ರಾಮ ಪಂಚಾಯತ್‌ ನಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಿಂದ ಕೆಲಸ ಕೊಡುತ್ತೇವೆ.
 
ಅಲ್ಲದೆ, ಅರ್ಹ ಫಲಾನುಭವಿಗಳು ತಮ್ಮ ತಮ್ಮ ಹೊಲಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಬದು, ಗೋಕಟ್ಟೆಗಳಂತಹ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ. ಅರ್ಹ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕೂಲಿ ಕಾರ್ಮಿಕ ರಾಮಾಂಜನೇಯ ಮಾತನಾಡಿ, ನಾವು ಫೆಬ್ರವರಿ 2ನೇ ತಾರೀಖೀನಿಂದ ಕೆಲಸ ಮಾಡಿದ್ದರೂ ಈವರೆಗೆ ನಮ್ಮ ಖಾತೆಗೆ ಹಣ ಪಾವತಿಯಾಗಿಲ್ಲ. ನಾವು ಇದನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದೇವೆ. ಆದರೆ ನಮ್ಮ ಖಾತೆಗೆ ಹಣ ಪಾವತಿಯಾಗದಿದ್ದರೆ ನಾವು ಜೀವನ ಸಾಗಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಕೆ.ನಿತೀಶ್‌, ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ. ಕೂಡಲೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಕೂಲಿ ಕಾರ್ಮಿಕರಾದ ಮಂಗಳಮ್ಮ ಮಾತನಾಡಿ, ನಾವು ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ, ಸಂಜೆ ಮನೆಗೆ ಹೋದರೆ ನಮ್ಮ ಗ್ರಾಮದಲ್ಲಿ ಕುಡಿಯುವ ನೀರೇ ಸಿಗುವುದಿಲ್ಲ. ಪ್ರತಿವರ್ಷ ಗ್ರಾಮದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ.

Advertisement

ನಾವು ಬೆಳಗ್ಗೆ ಕೆಲಸಕ್ಕೆ ಬಂದರೆ ಕುಡಿಯುವ ನೀರು ಸಂಗ್ರಹಿಸುವುದಕ್ಕೆ ಕಷ್ಟವಾಗುತ್ತದೆ. ಕೂಡಲೇ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಜಿಪಂ ಸಿಇಒ ಅವರನ್ನು ಒತ್ತಾಯಿಸಿದರು.

ಕಾರ್ಮಿಕರ ಸಮಸ್ಯೆ ಆಲಿಸಿದ ಜಿಪಂ ಸಿಇಒ ಕೆ.ನಿತೀಶ್‌, ಸ್ಥಳದಲ್ಲಿಯೇ ಇದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೂಡಲೇ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದ ಗ್ರಾಮಸ್ಥರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕೆಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ, ಅಲೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಶ್ರೀನಿವಾಸನ್‌ರೆಡ್ಡಿ, ಮಲ್ಲಪ್ಪ ಹಾಗೂ ಗ್ರಾಪಂ ಸಿಬ್ಬಂದಿ ಅನಂತ್‌, ಸಂತೋಷ್‌ ಸೇರಿದಂತೆ ಇನ್ನಿತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next