Advertisement

ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರದ ಅರಿವು ಮೂಡಿಸಿ

09:05 PM Oct 14, 2019 | Lakshmi GovindaRaju |

ಗೌರಿಬಿದನೂರು: ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಶೈವಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ರಂಭಾಪುರಿ ಖಾಸಾ ಶಾಖಾ ಮಠ, ಸುಕ್ಷೇತ್ರ ಸಿದ್ಧರ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

Advertisement

ನಗರದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಹಾಗೂ ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಂಸ್ಕಾರ ಕಲಿಸಿ: ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹದ ಜತೆಗೆ ಸಂಸ್ಕಾರದ ಅರಿವು ಮೂಡಿಸಬೇಕಿದೆ. ಪೋಷಕರು ನಮ್ಮ ಧರ್ಮದ ಸಂಸ್ಕಾರ, ಆಚಾರ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಬೇಕಿದೆ ಎಂದು ತಿಳಿಸಿದರು.

ಮಹಿಳಾ ಘಟಕ: ವೀರಶೈವ ಮಹಾಸಭಾ ಮಹಿಳಾ ಘಟಕ ತಾಲೂಕಿನಲ್ಲಿ ಅಸ್ಥಿತ್ವಕ್ಕೆ ಬರುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಲಿದೆ. ಜತೆಗೆ ಧಾರ್ಮಿಕ ಸಂಸ್ಕಾರದ ಬಗ್ಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ತಿಪ್ಪಣ್ಣ ಮಾತನಾಡಿ, ಸಮುದಾಯದವರ ಉತ್ಸಾಹವೇ ಸಮಾಜ ಉಜ್ವಲ ಭವಿಷತ್ತನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಮುದಾಯದ ಏಳಿಗೆಗೆ ಸಂಘಟಿತರಾಗಬೇಕೆಂದರು.

ವೀರಶೈವ ಲಿಂಗಾಯತ ಸಮಾಜದ ಸಂಕಷ್ಟಗಳನ್ನು ಬಗೆಹರಿಸುವ ಸಲುವಾಗಿ 120 ವರ್ಷಗಳ ಹಿಂದೆ ಶ್ರೀ ಹಾನಗಲ್‌ ಕುಮಾರ ಮಹಾಸ್ವಾಮಿಯವರು ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಸ್ಥಾಪನೆ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದು ಸ್ಮರಿಸಿದರು.

Advertisement

ಉತ್ತಮ ಸಮಾಜಕ್ಕೆ ಶ್ರಮಿಸಿ: ಕ್ಷೇತ್ರದ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣ ಶರಣೆಯರು ಸಮಾಜದ ಅಭಿವೃದ್ಧಿಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಇವರ ವಚನಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಜಾತಿ ವ್ಯವಸ್ಥೆಯಿಂದ ಹೊರ ಬರುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದರು.

ವೀರಶೈವ ಮಠ ಮಾನ್ಯಗಳು ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ನೀಡುವ ಮೂಲಕ ಸಮಾಜದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿವೆ ಎಂದರು. ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಬಿ.ಎಂ.ನಟರಾಜ್‌ ಮಾತನಾಡಿ, ಪ್ರತಿ ವರ್ಷವೂ ತಾಲೂಕು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ಎಚ್‌.ಎಂ.ರೇಣುಕ ಪ್ರಸನ್ನ, ನಿರ್ದೇಶಕ ಟಿ.ಜಿ.ಗಂಗಾಧರಯ್ಯ(ಎಸ್‌.ಎಸ್‌), ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌,

ಯುವ ಘಟಕದ ಕಾರ್ಯದರ್ಶಿ ಎನ್‌.ಗೌರೀಶ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ಎಂ.ಚಿಕ್ಕಣ್ಣ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಬಿ.ಪ್ರವೀಣ್‌ಕುಮಾರ್‌, ಉಪಾಧ್ಯಕ್ಷರಾದ ಮಂಜುನಾಥ್‌, ಗೌರಮ್ಮ, ಖಜಾಂಚಿ ಜಿ.ರಾಜಣ್ಣ, ಕಾರ್ಯದರ್ಶಿ ಎಂ.ಪಿ.ಪ್ರಸನ್ನಕುಮಾರ್‌, ರುದ್ರಮ್ಮ, ರಘುನಂದ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next