ಮುಂಬಯಿ: ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಸಮಾಜವಾದಿ ಪಾರ್ಟಿಯ ಸ್ಥಳದಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಈ ವಿಷಯವಾಗಿ ನಾನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧನಾಗಿದ್ದೇನೆ ಎಂದವರು ಹೇಳಿದ್ದಾರೆ.
ಬಿಜೆಪಿಯ ಸಹಾಯದಿಂದಾಗಿ ಮಾಯಾವತಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಅವರು ಸಮಾಜ ವಾದಿ ಪಕ್ಷದೊಂದಿಗೆ ಅಸಮತೋಲಿತ ಮೈತ್ರಿ ಮಾಡಿಕೊಳ್ಳುವ ಬದಲಿಗೆ ಬಿಜೆಪಿಯೊಂದಿಗೆ ಸಮತೋಲಿತ ಮೈತ್ರಿಯನ್ನು ಮಾಡಿಕೊಳ್ಳಬೇಕು ಎಂದು ಆರ್‌ಪಿಐ ಅಧ್ಯಕ್ಷ ಅಠವಳೆ ನುಡಿದಿದ್ದಾರೆ.
ಸಮಾಜವಾದಿ ಪಕ್ಷ ಒಂದು ಅವಕಾಶವಾದಿ ಪಕ್ಷವಾಗಿದೆ ಎಂದು ಇತ್ತೀಚಿನ ರಾಜ್ಯಸಭೆ ಚುನಾವಣೆಯಿಂದ ಸ್ಪಷ್ಟವಾಗಿದೆ. ಬಿಎಸ್‌ಪಿ ಲೋಕಸಭೆ ಉಪಚುನಾವಣೆಯಲ್ಲಿ ಸಮಾಜ ವಾದಿ ಪಕ್ಷಕ್ಕೆ ಸಂಪೂರ್ಣ ಸಹಕಾರ ನೀಡಿತ್ತು. ಇದರಿಂದಾಗಿ ಅದು ಗೆಲುವು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೋಸದಿಂದಾಗಿ ಬಿಎಸ್‌ಪಿಗೆ ಸೋಲು ಉಂಟಾಗಿದೆ ಎಂದರು. ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟವನ್ನು ಅಂಬೇಡ್ಕರ್‌ವಾದಿ ಸಮಾಜ ಕೂಡ ಒಪ್ಪಲ್ಲ ಎಂದವರು ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಗೆಲುವನ್ನು ಸಾಧಿಸಲಿದೆ. ಇಡೀ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವೀಕಾರಾರ್ಹತೆ ಹೆಚ್ಚಾಗಿದ್ದು, ಇತ್ತೀಚೆಗೆ ಸಂಪನ್ನಗೊಂಡ ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅದು ಸಾಬೀತಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗುವ ಸರಕಾರ ವಿರೋಧಿ ಲೇಖನಗಳ ಬಗೆಗೆ ಮಾತನಾಡಿದ ಅಠವಳೆ ಅವರು, ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಅಥವಾ ಸರಕಾರದೊಂದಿಗೆ ಏನಾದರೂ ತೊಂದರೆ ಇದ್ದರೆ ಅವರು ನೇರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತನಾಡಬೇಕು. ಪಕ್ಷದ ಮುಖವಾಣಿ ಮೂಲಕ ಸರಕಾರದ ವಿರುದ್ಧ ಟೀಕಾದಾಳಿ ನಡೆಸುವುದು ಸರಿಯಲ್ಲ ಎಂದರು.