Advertisement
ಪಶ್ಚಿಮ ಬಂಗಾಳದಿಂದ ಖೋಟಾ ನೋಟುಗಳನ್ನು ತರುವ ದಂಧೆಕೋರರು, ಅವುಗಳನ್ನು ಸ್ಥಳೀಯ ದಂಧೆಕೋರರಿಗೆ ತಲುಪಿಸಲು ಮೆಜೆಸ್ಟಿಕ್ ಆಸುಪಾಸಿನ ಸ್ಥಳಗಳನ್ನೇ ಕೇಂದ್ರವಾಗಿಸಿಕೊಂಡಿದ್ದರು. ಗಂಗಾಧರ ಕೋಲ್ಕರ, ಓರ್ವ ಮಹಿಳೆ, ಪಶ್ಚಿಮ ಬಂಗಾಳ ಮೂಲದ ಸಜ್ಜಾದ್ ಅಲಿ, ಎಂ.ಜಿ.ರಾಜು ಎಂಬವರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿವೆ.
Related Articles
Advertisement
ಏನಿದು ಚಿಕ್ಕೋಡಿ ಪ್ರಕರಣ?: ಚಿಕ್ಕೋಡಿಯ ಖೋಟಾ ನೋಟು ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗಂಗಾಧರ ಕೋಲ್ಕರ, ಮಹಿಳೆ, ಪಶ್ಚಿಮ ಬಂಗಾಳ ಮೂಲದ ಸಜ್ಜಾದ್ ಅಲಿ ಹಾಗೂ ಎಂ.ಜಿ ರಾಜು ಎಂಬ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದು, ಅವರ ಬಳಿ ಇದ್ದ ನಕಲಿ ನೋಟು ವಿನಿಮಯಕ್ಕೆ ಸಂಬಂಧಿಸಿದ ಡೈರಿ, ಟೆಲಿಪೋನ್ ನಂಬರ್‌ಗಳ ಪುಸ್ತಕ ವಶಕ್ಕೆ ಪಡೆಯಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಚಿಕ್ಕೋಡಿಯ ಖೋಟಾ ನೋಟು ಪ್ರಕರಣದಲ್ಲಿ ಮೂವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಬಾಂಗ್ಲಾ ಗಡಿಯಿಂದ ಬೆಂಗಳೂರಿಗೆ ಖೋಟಾ ನೋಟು ಸರಬರಾಜಾಗುತ್ತಿದ್ದ ವಿಚಾರ ಗಮನಕ್ಕೆ ಬಂದಿತ್ತು. ಅಲ್ಲದೆ, ರಾಜ್ಯದ ಖೋಟಾ ನೋಟು ದಂಧೆ ಬೇರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿರುವ ಮಾಹಿತಿ ಕೂಡ ದೊರೆತಿತ್ತು.
ನಂತರ ತನಿಖೆ ಚುರುಕುಗೊಳಿಸಿದ ಎನ್‌ಐಎ ತಂಡ, ಖೋಟಾ ನೋಟು ಜಾಲದಲ್ಲಿ ಸಕ್ರಿಯವಾಗಿರುವ ಓರ್ವ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 2000 ರೂ. ಮುಖಬೆಲೆಯ ಒಟ್ಟು 7 ಲಕ್ಷ ರೂ. ಜಪ್ತಿ ಮಾಡಿದೆ. ಅಲ್ಲದೆ, ಜಾಲದಲ್ಲಿ ಸಕ್ರಿಯರಾಗಿರುವ ಇನ್ನೂ ಹಲವು ಮಂದಿ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳೆಲ್ಲರೂ ಹಲವು ವರ್ಷಗಳಿಂದ ಈ ಜಾಲದಲ್ಲಿ ಸಕ್ರಿಯರಾಗಿದ್ದು, ಪಶ್ಚಿಮ ಬಂಗಾಳದಿಂದ ಬರುವ ಖೋಟಾ ನೋಟುಗಳನ್ನು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ಇನ್ನಿತತ ಭಾಗಗಳಲ್ಲಿ ಚಲಾವಣೆ ಮಾಡುತ್ತಿದ್ದರು. ಖೋಟಾ ನೋಟು ಬದಲಾವಣೆಗೆ ನೀಡುವ ಕಮಿಷನ್ ಆಸೆಗೆ ಈ ದಂಧೆಯಲ್ಲಿ ಭಾಗಿಯಾಗಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ದಂಧೆಯ ಉಸ್ತುವಾರಿ ಹೊತ್ತಿದ್ದ ಗಂಗಾಧರ!: ಈ ಹಿಂದೆ ಪಶ್ಚಿಮ ಬಂಗಾಳದಿಂದ ರಾಜ್ಯಕ್ಕೆ ಬರುವ ಖೋಟಾ ನೋಟುಗಳನ್ನು ಏಜೆಂಟರ ಮೂಲಕ ವಿನಿಮಯ ಮಾಡಿಸುತ್ತಿದ್ದ ಅಶೋಕ್ ಕುಂಬಾರ್, ಮಾ.12ರಂದು ಎನ್‌ಐಎ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಇದಾದ ಕೆಲ ದಿನಗಳವರೆಗೆ ತಲೆಮರೆಸಿಕೊಂಡಿದ್ದ ಗಂಗಾಧರ ಕೋಲ್ಕರ, ನಕಲಿ ನೋಟು ದಂಧೆಯ ಹೊಣೆ ವಹಿಸಿಕೊಂಡಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಅದೇ ರೀತಿ ಕಳೆದ ಮಾರ್ಚ್‌ನಲ್ಲಿ ದಲೀಮ್ ಮಿಯಾ ಬಂಧನದ ಬಳಿಕ ಬಂಗಾಳದಿಂದ ಖೋಟಾ ನೋಟುಗಳನ್ನು ತರುವ ಕೆಲಸವನ್ನು ಸಜ್ಜಾದ್ ಅಲಿ ಮಾಡುತ್ತಿದ್ದ. ಆತನಿಂದ ಖೋಟಾ ನೋಟು ಪಡೆದುಯುತ್ತಿದ್ದ ಗಂಗಾಧರ್, ಉಳಿದ ಆರೋಪಿಗಳಿಗೆ ನೀಡಿ ಚಲಾವಣೆ ಮಾಡಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮಾಸ್ಟರ್ ಮೈಂಡ್‌ಗಳಿಗೆ ಬಲೆ?: ಕೊಲ್ಕತ್ತಾ ಪೊಲೀಸರಿಂದ ಬಂಧಿತನಾಗಿ ಜೈಲಿನಲ್ಲಿರುವ ಶಹನೋಯಾಜ್ ಕಸೂರಿ ಅಲಿಯಾಸ್ ಇಶಾಕ್ ಶೇಖ್, ಆತನ ಸಹಚರರಾದ ಸರೀಫುಲ್ ಇಸ್ಲಾಂ ಹಾಗೂ ಸುಕ್ರುದ್ದೀನ್ ಅನ್ಸಾರಿ ರಾಜ್ಯಕ್ಕೆ ಖೋಟಾ ನೋಟು ಸರಬರಾಜು ಮಾಡುತ್ತಿದ್ದಾರೆ ಎಂದು ಪತ್ತೆಹಚ್ಚಿರುವ ಎನ್‌ಐಎ, ಅವರ ಬಂಧನಕ್ಕೆ ಬಲೆಬೀಸಿದೆ. ಖೋಟಾ ನೋಟು ದಂಧೆ ಪ್ರಕರಣದಲ್ಲೇ ಶಹನೋಯಾಜ್ ಜೈಲು ಸೇರಿದ ಬಳಿಕ, ರಾಜ್ಯಕ್ಕೆ ಖೋಟಾ ನೋಟು ಸರಬರಾಜು ಮಾಡುವ ಉಸ್ತುವಾರಿಯನ್ನು ಸರೀಪುಲ್, ಸುಕ್ರುದ್ದೀನ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲು ಬಲೆಗೆಬಿದ್ದ ದಲೀಮ್!: ಖೋಟಾ ನೋಟು ಚಲಾವಣೆ ಸಂಬಂಧ ಮಾರ್ಚ್ 12ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದಲೀಮ್ ಮಿಯಾನನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು, ಆತ ನೀಡಿದ ಚಿಕ್ಕೋಡಿಯ ಅಶೋಕ್ ಕುಂಬಾರ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 2000 ಮುಖಬೆಲೆಯ 82 ಸಾವಿರ ರೂ. ಖೋಟಾ ನೋಟುಗಳು ಪತ್ತೆಯಾಗಿದ್ದವು. ಅದೇ ರೀತಿ ರಾಯಭಾಗದ ರಾಜೇಂದ್ರ ಪಾಟೀಲ್‌ನನ್ನೂ ಬಂಧಿಸಿದ್ದರು. ಸದ್ಯ ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.