Advertisement

ನಿರ್ವಹಣೆ ಮರೆತ ಕಿಂಡಿ ಅಣೆಕಟ್ಟು: ನೀರು ಹಿಡಿದಿಡಲು ರೈತರ ಸಾಹಸ

11:49 AM Jan 23, 2018 | |

ಪುತ್ತೂರು: ತಾಲೂಕಿನಲ್ಲಿ 50ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಇವುಗಳ ಪೈಕಿ ಬಹುತೇಕ ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ. ಇದರಲ್ಲಿ ಸಂಟ್ಯಾರು ಬಳಿಯ ಕೈಕಾರ ಎರ್ಮೆಟ್ಟಿ ನೀರ್ಪಾಡಿ ಕಿಂಡಿ ಅಣೆಕಟ್ಟು ಕೂಡ ಒಂದು.

Advertisement

ಸುಮಾರು 39 ವರ್ಷಗಳಷ್ಟು ಹಳೆಯದಾದ ಕಿಂಡಿ ಅಣೆಕಟ್ಟು ಇದು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸೀತಾನದಿ ಎದುರಾಗುತ್ತದೆ. ಹಲವು ವರ್ಷಗಳಿಂದ ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆ ಎದುರಿಸುತ್ತಿದೆ. ದುರಸ್ತಿಪಡಿಸಿ ಎಂದು ಜಿಲ್ಲಾ ಪಂಚಾಯತ್‌ ಸಹಿತ ಅಧಿಕಾರಿಗಳಿಗೆ ಮನವಿ ನೀಡಿದರೆ, ಹೊಸ ಕಿಂಡಿ ಅಣೆಕಟ್ಟಿಗೆ ಮಾತ್ರ ಅನುದಾನ ಸಿಗುತ್ತದೆ ಎನ್ನುತ್ತಾರೆ.

1979ರಲ್ಲಿ 7 ಕಿಂಡಿಯ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅಣೆಕಟ್ಟಿನ ಹಲಗೆ ತೆಗೆದಿಡಲು ಶೆಡ್‌ ಕೂಡ ನಿರ್ಮಿಸಲಾಯಿತು. ಆದರೆ ಇವೆರಡೂ ಇದೀಗ ಪಾಳು ಬೀಳುತ್ತಿವೆ ಎಂದು ಸ್ಥಳೀಯರು ಖೇದ ವ್ಯಕ್ತಪಡಿಸುತ್ತಾರೆ. ಸುಮಾರು 39 ವರ್ಷಗಳ ಅವಧಿಯಲ್ಲಿ ಮೊದಲಿನ ಕೆಲ ವರ್ಷ ಮಾತ್ರ ಇದು ಸರಿಯಾಗಿ ನೀರು ಹಿಡಿದಿಡುತ್ತಿತ್ತು. ಹಲಗೆ ಗೆದ್ದಲು ಹಿಡಿದು ಹಾಳಾಗುತ್ತಿದ್ದಂತೆ, ಸ್ಥಳೀಯರೆ ಮಣ್ಣು ರಾಶಿ ಹಾಕಿ ನೀರು ಹಿಡಿದಿಡುವ ಕೆಲಸ ಮಾಡಿದರು. ಸ್ಥಳೀಯರು ಉತ್ಸಾಹ ಕಳೆದುಕೊಳ್ಳುತ್ತಿದ್ದಂತೆ, ಮತ್ತೆ ಅಣೆಕಟ್ಟು ನಿರ್ಗತಿಕವಾಯಿತು.

ಹೀಗೆ ನಿರ್ಮಿಸಿದರು
ಸಮೀಪದ ಮಣ್ಣು ಖಾಲಿಯಾಗಿದೆ. ಆದ್ದರಿಂದ 600 ಗೋಣಿಯಷ್ಟು ಹೊಗೆ ಚೀಲ ಬಳಸಿಕೊಳ್ಳಲಾಗಿದೆ. ಕಿಂಡಿ ಅಣೆಕಟ್ಟಿಗೆ ತೆಂಗಿನ ಸಲಾಕೆಗಳನ್ನು ಅಡ್ಡವಿಟ್ಟು, ಇದಕ್ಕೆ ಮರಳ ಚೀಲಗಳನ್ನು ಜೋಡಿಸಲಾಗುತ್ತದೆ. ಮರಳ ಚೀಲಕ್ಕೆ ಟಾರ್ಪಾಲು ಹಾಸುವುದರಿಂದ ನೀರು ಸೋರಿಕೆ ಆಗುವುದಿಲ್ಲ. ಈ ಬಾರಿ ಫೌಂಡೇಷನ್‌ ಕೆಲಸವನ್ನೂ ಮಾಡಿದ್ದು, ಮರಳ ಚೀಲಗಳನ್ನೇ ಬಳಸಿಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿ, ದುರಸ್ತಿ ಮಾಡಬೇಕು ಎನ್ನುವುದು ಸ್ಥಳೀಯ ಸಂತೋಷ್‌ ರೈ ಕೈಕಾರ ಅವರ ಮನವಿ.

ತಾತ್ಕಾಲಿಕ ತಡೆಗೋಡೆ
ನಾಲ್ಕು ದಿನ 25 ಜನರು ಸೇರಿ ಕಿಂಡಿ ಅಣೆಕಟ್ಟಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕೆ ಫೈಬರ್‌ ಅಳವಡಿಸಿದರೆ ಉತ್ತಮ. 2006ರಿಂದ ಎರ್ಮೆಟ್ಟಿ ಕಿಂಡಿ ಅಣೆಕಟ್ಟು ಪಾಳು ಬಿದ್ದಿತ್ತು.
ಸಂತೋಷ್‌ ರೈ ಕೈಕಾರ, ಸ್ಥಳೀಯ ನಿವಾಸಿ

Advertisement

ಹಸ್ತಾಂತರಿಸಿದರೆ ದುರಸ್ತಿ
ಎರ್ಮೆಟ್ಟಿ ಕಿಂಡಿ ಅಣೆಕಟ್ಟು ನಮ್ಮ ಇಲಾಖೆ ಸೇರಿಲ್ಲ. ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರ ಮಾಡಿದರೆ, ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬಹುದು.
ಆನಂದ್‌, ಸಹಾಯಕ ಎಂಜಿನಿಯರ್‌, ಸಣ್ಣ ಕೈಗಾರಿಕಾ ಇಲಾಖೆ

ಗಣೇಶ್‌ ಎನ್‌. ಕಲ್ಲರ್ಪ

Advertisement

Udayavani is now on Telegram. Click here to join our channel and stay updated with the latest news.

Next