Advertisement

ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಿ

04:58 PM Jul 05, 2018 | |

ಬಾದಾಮಿ: ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾಗಿರುವ ಎಲ್ಲ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯ ಸಭಾಭವನದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಗಳ ಪೈಕಿ ಹೃದಯ, ಅಮೃತ, ಕೆಶಿಪ್‌, ನಗರೋತ್ಥಾನ ಯೋಜನೆಗಳು ಯೋಜನಾ ವರದಿಯಂತೆ ಅನುಷ್ಟಾನವಾಗಬೇಕು. ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಬೇಕು. ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೆ ಸಂಬಂಧಿಸಿದವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಹೃದಯ ಯೋಜನೆಯಡಿ ಪುರಾತತ್ವ ಶೈಲಿಯ ವಿದ್ಯುತ್‌ ದೀಪ ಅಳವಡಿಸಬೇಕು ಎಂದು ಅಭಿಯಂತರರಿಗೆ ಸೂಚಿಸಿದರು. ಪ್ರವಾಸೋದ್ಯಮ ಸ್ಥಳದಲ್ಲಿ ಇ-ಶೌಚಾಲಯ ನಿರ್ಮಾಣ, ಬಾದಾಮಿ ಮುಖ್ಯ ರಸ್ತೆಯಲ್ಲಿ ನಿಗದಿಯಂತೆ 16 ಮೀ ರಸ್ತೆ ನಿರ್ಮಿಸಬೇಕು. ಒತ್ತುವರಿ ಮಾಡಿದ ಮೆಟ್ಟಿಲುಗಳನ್ನು ಸ್ಥಳೀಯ ಪುರಸಭೆ, ತಹಶೀಲ್ದಾರ್‌, ಕೆಶಿಪ್‌ ಸಹಯೋಗದಲ್ಲಿ ತೆರವುಗೊಳಿಸಬೇಕು ಎಂದು ಹೇಳಿದರು.

ರಸ್ತೆ ವಿಭಜಕ ಅಳವಡಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯವರು ಸಭೆಯಲ್ಲಿ ಠರಾವು ಮಾಡಿ ಅನುಷ್ಟಾನಗೊಳಿಸಬೇಕು ಎಂದು ಸೂಚಿಸಿದರು. ಅಮೃತ ಯೋಜನೆಯ ಯುಜಿಡಿ ಕಾಮಗಾರಿ ಪರಿಶೀಲನೆ ನಡೆಸಿ ಇನ್ನುಳಿದ 7 ಕಿ.ಮೀ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್‌ ಎಸ್‌.ಬಿ. ಇಂಗಳೆ, ಯೋಜನಾ ನಿರ್ದೇಶಕ ಔದ್ರಾಮ, ಇಂಟ್ಯಾಕ್‌ನ ಪ್ರಶಾಂತ ಗೋಡ್ಕಿಂಡಿ, ಮುಖ್ಯಾಧಿಕಾರಿ ಎಫ್‌.ಬಿ. ಗಿಡ್ಡಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಬಾದಾಮಿ ನಗರ ಹೋರಾಟ ಸಮಿತಿಯ ವತಿಯಿಂದ ಮುಖ್ಯರಸ್ತೆ ವಿಭಜಕ, ಪಾದಚಾರಿ ರಸ್ತೆ ನಿರ್ಮಾಣ, ಗುಣಮಟ್ಟದ ಕಾಮಗಾರಿ ಸೇರಿದಂತೆ ವಿವಿದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಎಂ. ಎಸ್‌. ಹಿರೇಹಾಳ, ನಿಸರ್ಗ ಬಳಗದ ಅಧ್ಯಕ್ಷ ಎಚ್‌.ಎಸ್‌.ವಾಸನ, ಇಷ್ಟಲಿಂಗ ನರೇಗಲ್‌, ಮಹಾಂತೇಶ ವಡ್ಡರ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next