Advertisement

ಖಾಯಂಗೊಳಿಸಿ, ಸೇವಾಭದ್ರತೆ ಒದಗಿಸಿ

11:58 PM Feb 22, 2023 | Team Udayavani |

ರಾಜ್ಯದ ಎಲ್ಲ ಪಕ್ಷಗಳು ತಮ್ಮದೇ ಆದ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿವೆ. ಈ ಹೊತ್ತಿನಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಪರಿಣತರು,ಸಂಘಟನೆಗಳ ಪದಾಧಿಕಾರಿಗಳು ತಮ್ಮ ಬೇಡಿಕೆ, ಹಕ್ಕೊತ್ತಾಯವನ್ನು ಇಲ್ಲಿ ಮಂಡಿಸುತ್ತಾರೆ.

Advertisement

ಡಿ. ನಾಗಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ,
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಸುಮಾರು 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ- ಮಗುವಿನ ಆರೈಕೆ ಸಹಿತ ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ವಿವಿಧ ಅಭಿಯಾ ನಗಳ ಸದಾ ಅರಿವು ಮೂಡಿಸುವುದು ಹಾಗೂ ಗ್ರಾಮ ನೈರ್ಮಲ್ಯ ಕುರಿತಂತೆ ಆರೋಗ್ಯ ಇಲಾಖೆ ಮತ್ತು ಜನರಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ರಾಜ್ಯದ ಆಶಾ ಕಾರ್ಯಕರ್ತೆಯರು ಕೋವಿಡ್‌ 19 ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಯೋಧರಾಗಿ ಜನರ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಮೆಚ್ಚಿಕೊಂಡು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಮಾತ್ರವಲ್ಲದೇ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯಿಂದ “ಭರವಸೆಯ ನಾಯಕರು’ ಎಂಬ ಪ್ರಶಂಸೆಯನ್ನು ಪಡೆದಿದ್ದಾರೆ.

ಇಷ್ಟೆಲ್ಲ ಆದರೂ ನಮಗೆ ಸೇವಾಭದ್ರತೆಯೇ ಇಲ್ಲ. ಹಿಂದಿನ ಸರಕಾರಗಳಿಂದಲೂ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ, ಆಶಾ ಕಾರ್ಯಕರ್ತೆಯರನ್ನು ಖಾಯಂಗೊಳಿಸಿ, ಸೇವಾ ಭದ್ರತೆ ಒದಗಿಸಬೇಕು. ಹೆಚ್ಚುವರಿ ಕೆಲಸ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ದುಬಾರಿ ಖರ್ಚು ವೆಚ್ಚ ಗಳಿಗೆ ಅನುಗುಣವಾಗಿ ಜೀವನ ನಡೆಸಲು ಬೇಕಾದ ಕನಿಷ್ಠ ವೇತನ 16 ಸಾವಿರ ರೂ. ನಿಗದಿ ಮಾಡಬೇಕು ಎಂದು ನಾವು ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸುತ್ತೇವೆ. ಈ ಕೆಳಗಿನ ನಮ್ಮ ಬೇಡಿಕೆಯ ಪಟ್ಟಿಯನ್ನು ತಂತಮ್ಮ ಪ್ರಣಾಳಿಕೆ ಯಲ್ಲಿ ಸೇರಿಸಿಕೊಂಡು ಮುಂದೆ ಅಧಿಕಾರಕ್ಕೆ ಬಂದಾಗ ಜಾರಿಗೊಳಿಸಬೇಕೆಂದು ಎಲ್ಲ ಪಕ್ಷಗಳನ್ನೂ ಕೋರುತ್ತೇವೆ.

ತೀವ್ರ ಅನಾರೋಗ್ಯಕ್ಕೆ ಒಳಗಾದ ಆಶಾ ಕಾರ್ಯ ಕರ್ತೆಯರಿಗೆ ಅನಾರೋಗ್ಯಕ್ಕೆ ಅನುಗುಣವಾಗಿ ಚೇತರಿಕೆ ಪರಿಹಾರ ನೀಡಲು “ಆಶಾ ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪಿಸಬೇಕು.

Advertisement

2022ರ ಡಿಸೆಂಬರ್‌ ಅನಂತರ ಆರ್‌.ಸಿ.ಎಚ್‌.(ಆಶಾ ನಿಧಿ) ಪೋರ್ಟಲ್‌ನಿಂದ ಪ್ರೋತ್ಸಾಹ ಧನ ಪಾವತಿಯನ್ನು ತತ್‌ಕ್ಷಣ ಸ್ಥಗಿತಗೊಳಿಸಬೇಕು.

ಆರ್‌ಸಿಎಚ್‌ ಪೋರ್ಟಲ್‌ನ ವಿವಿಧ ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಕಾರ್ಯಕರ್ತೆಯರಿಗೆ ಆಗಿರುವ ಆರ್ಥಿಕ ನಷ್ಟವನ್ನು ಹಿಂಬಾಕಿ ರೂಪದಲ್ಲಿ ಪರಿಹಾರ ನೀಡಬೇಕು.

ಬೆಂಗಳೂರು ನಗರ, ಬಿಬಿಎಂಪಿ ಸಹಿತ ಇನ್ನಿತರ ಜಿಲ್ಲೆಗಳಲ್ಲಿ ಬಾಕಿ ಇರುವ 2 ರಿಂದ 3 ತಿಂಗಳ ನಿಗದಿತ ಗೌರವಧನ ಹಾಗೂ ಕೇಂದ್ರದ ಬಾಕಿ ಪ್ರೋತ್ಸಾಹ ಧನ ಕೂಡಲೇ ನೀಡಬೇಕು.

ಸೇವಾ ನಿವೃತ್ತಿ ಅಥವಾ ಸೇವಾ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಈಗಿರುವ 20 ಸಾವಿರ ರೂ. ಇಡುಗಂಟನ್ನು ಪಶ್ಚಿಮ ಬಂಗಾಲದಲ್ಲಿರುವಂತೆ ಮೂರು ಲಕ್ಷ ರೂ.ಗೆ ಹೆಚ್ಚಿಸಬೇಕು.

ಆಶಾ ಸುಗಮಕಾರರನ್ನು “ಆಶಾ’ಯಿಂದ ಬೇರ್ಪಡಿಸಿ, ಅವರ ಹುದ್ದೆಗೆ ಅನುಗುಣವಾಗಿ ಮಾಸಿಕ ಗೌರವಧನ ಮತ್ತು ಪ್ರಯಾಣ ಭತ್ತೆ ನಿಗದಿ ಮಾಡಬೇಕು. ಜತೆಗೆ ನಗರದ ಪ್ರದೇಶಗಳಿಗೂ ಸುಗಮಕಾರರನ್ನು ನೇಮಿಸಬೇಕು.

ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸಾವನ್ನಪ್ಪಿದರೆ, ಅವರ ಕೆಲಸವನ್ನು ಅವರ ಕುಟುಂಬಸ್ಥರಿಗೆ ನೀಡಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next