ಬ್ಯಾಡಗಿ: ನನೆಗುದಿಗೆ ಬಿದ್ದಿರುವ ಪಟ್ಟಣದ ಮುಖ್ಯ ರಸ್ತೆ (ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136) ಅಗಲೀಕರಣಕ್ಕೆ ಆಗ್ರಹಿಸಿ ಮುಖ್ಯ ರಸ್ತೆ ಅಗಲೀಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಗುರುವಾರ ಹಳೇ ಪುರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿವೆ.
ಮುಖ್ಯ ರಸ್ತೆ ಅಗಲೀಕರಣ ಹೋರಾಟ ಸಮಿತಿಯ ನೂರಾರು ಸದಸ್ಯರು ಬುಧವಾರವೇ ಹಳೇ ಪುರಸಭೆ ಎದುರು ಧರಣಿ ಆರಂಭಿಸಿದ್ದರು.
ನಮ್ಮ ರಸ್ತೆ ನಮ್ಮ ಹಕ್ಕು: ಗುರುವಾರ ಆರಂಭವಾದ ಧರಣಿಯಲ್ಲಿ ಮಾತನಾಡಿದ ರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, 13 ವರ್ಷ ನಿರಂತರ ಹೋರಾಟ ನಡೆಸಿದರೂ ಮುಖ್ಯ ರಸ್ತೆ ಅಗಲೀಕರಣವಾಗಿಲ್ಲ. ಪಟ್ಟಣದ ಸಾರ್ವಜನಿಕರು ತಮ್ಮ ಅನುಕೂಲಕ್ಕೆ ಅವಶ್ಯಕವಿರುವ ರಸ್ತೆಗಳನ್ನು ನಿರ್ಮಿಸಿಕೊಳ್ಳಲು ನಿರ್ಧರಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಿರ್ಧಾರಗಳಿಗೆ ಮನ್ನಣೆ ಸಿಗುತ್ತಿಲ್ಲ. ಅಗಲೀಕರಣ ವಿಷಯದಲ್ಲಿ ಹೋರಾಟಗಾರರ ಸ್ವಾರ್ಥವಿಲ್ಲ. ಆದರೆ, ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗದ ಹೊರತು ಇಲ್ಲಿಂದ ಕಾಲ್ಕಿàಳುವ ಮಾತೇ ಇಲ್ಲವೆಂದರು.
ಮಾಡಬೇಡ ಎಂದಿಲ್ಲ: ರಸ್ತೆ ಅಗಲೀಕರಣ ವಿಷಯದ ಕುರಿತು ಉತ್ಛ ನ್ಯಾಯಾಲಯದಲ್ಲಿ ಸಲ್ಲಿ ಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಅರ್ಜಿದಾರರ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಅದಾಗ್ಯೂ, ಸರ್ಕಾರಿ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶೀಘ್ರದಲ್ಲೇ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದರು.
ಒತ್ತುವರಿ ತೆರವುಗೊಳಿಸಿ: ರೈತ ಮುಂಖಂಡ ಗಂಗಣ್ಣ ಎಲಿ ಮಾತನಾಡಿ, ಮುಖ್ಯ ರಸ್ತೆಯಲ್ಲಿರುವವರು ಮೂಲತಃ ಯಾರೊಬ್ಬರು ಭೂ ಮಾಲಿಕರಲ್ಲ. ಸರ್ಕಾರದ ಜಾಗೆಯನ್ನು ಒತ್ತುವರಿ ಮಾಡಿಕೊಂಡು ನಾವೇ ಮಾಲಿಕರೆಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ನಮ್ಮದೇ ಜಾಗವೆಂದು ಹೇಳಿಕೊಂಡು ತಿರುಗಾಡುತ್ತಿರುವ ಮಾಲಿಕರ ಹೆಸರುಗಳು ಸಿಟಿಎಸ್ ಕಾಲಂ ನಂಬರ್ ಏ ನಲ್ಲಿಲ್ಲ. ಬದಲಾಗಿ ಕಾಲಂ ನಂ.4 ರಲ್ಲಿ ಭೂ ಭಾಡೆದಾರ ಅಂತಾ ನಮೂದಿದೆ. ಆದರೂ, ಎಚ್ ಮತ್ತು ಎಚ್ 1 ಕಾಲಂನಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಂಡಿದ್ದಾರೆ. ಕೂಡಲೇ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿ, ಮುಲಾಜಿಲ್ಲದೇ ಒತ್ತುವರಿ ತೆರವುಗೊಳಿಸುವ ಮೂಲಕ ಅಗಲೀಕರಣಕ್ಕೆ ಮುಂದಾಗುವಂತೆ ಆಗ್ರಹಿಸಿದರು.
ಈ ವೇಳೆ ವಿಶೇಷ ಚೇತನರ ಸಂಘದ ಅಧ್ಯಕ್ಷ ಪಾಂಡುರಂಗ ಸುತಾರ, ಗುಲ್ಮಾನೆ ಮುಸ್ತಾಫಾ ಸಮಿತಿ ಅಧ್ಯಕ್ಷ ಅಜೀಜ ಬಿಜಾಪುರ, ಕಾರ್ಮಿಕ ಬಂಧು ಮಂಜುನಾಥ ಪೂಜಾರ, ರೈತ ಸಂಘದ ಬಸವರಾಜ ಸಂಕಣ್ಣನವರ, ಕೆ.ವಿ.ದೊಡ್ಡಗೌಡರ, ಕರವೇ ಬಸವರಾಜ ಹಾವನೂರ ಇನ್ನಿತರರು ಉಪಸ್ಥಿತರಿದ್ದರು.
ಶಾಸಕರ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿ, ನ್ಯಾಯಾಲಯದಲ್ಲಿ ರಸ್ತೆ ಅಗಲೀಕರಣ ಕುರಿತಂತೆ ಜೂ.17 ರಂದು ಹೈಕೋರ್ಟ್‌ನಿಂದ ಆದೇಶ ಹೊರಬರಲಿದೆ. ಆಗ ರಸ್ತೆ ಅಗಲಿಕರಣಕ್ಕೊಂದು ಸ್ಪಷ್ಟ ಚಿತ್ರಣ ಸಿಗುವ ಭರವಸೆಯಿದೆ. ಆದಷ್ಟು ಬೇಗನೆ ಮುಖ್ಯ ರಸ್ತೆ ಅಗಲೀಕರಣ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ, ಅದಕ್ಕೆ ಕ್ಯಾರೇ ಎನ್ನದ ಪ್ರತಿಭಟನಾಕಾರರು 2ನೇ ದಿನಕ್ಕೆ ಧರಣಿ ಮುಂದುವರೆಸಿದರು.
ಮುಖ್ಯ ರಸ್ತೆ ಅಗಲೀಕರಣ ವಿಳಂಬಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಮುಖ್ಯ ಕಾರಣವಾಗಿದೆ. ನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ತಂದವರನ್ನು ಬಿಟ್ಟು ಉಳಿದವರ ಪ್ರದೇಶದಲ್ಲಿ ಅಗಲೀಕರಣ ಪ್ರಕ್ರಿಯೆ ಆರಂಭಿಸಬೇಕು. –
ಮಹೇಶ ಉಜನಿ, ಕರವೇ ತಾಲೂಕು ಅಧ್ಯಕ್ಷ
ಕಳೆದ 13 ವರ್ಷಗಳಲ್ಲಿ ಅಧಿಕಾರದಲಿದ್ದ ಯಾವುದೇ ಸರಕಾರ ಹಾಗೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣಕ್ಕೆ ಮುಂದಾಗಿಲ್ಲ. ಇದರಿಂದಾಗಿ ಸಮಸ್ಯೆ ಇನ್ನೂ ಜೀವಂತವಾಗಿದೆ. ರಸ್ತೆ ಅಗಲೀಕರಣವಾಗಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಖಚಿತ.
-ಮಂಜುನಾಥ ಭೋವಿ, ಪುರಸಭೆ ಮಾಜಿ ಸದಸ್ಯ
ರಾಜ್ಯದಲ್ಲಿ ಅಭಿವೃದ್ಧಿ ಪರ್ವ ನಡೆಯುತ್ತಿದೆ ಎನ್ನುತ್ತಿರುವ ಆಡಳಿತಾರೂಢ ಪಕ್ಷದವರೇ ಮುಖ್ಯರಸ್ತೆಯಲ್ಲಿದ್ದು, ಅವರಿಂದಲೇ ಅಗಲೀಕರಣಕ್ಕೆ ಹಿನ್ನಡೆಯಾಗುತ್ತಿದೆ. ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಜೆಪಿಯಿಂದ ಕಪ್ಪು ಚುಕ್ಕೆ ಅಥವಾ ರಸ್ತೆ ಅಗಲೀಕರಣ ಸಮಸ್ಯೆ ನಿಮ್ಮ ಮುಂದಿನ ಚುನಾವಣಾ ಅಝೆಂಡಾ ಆಗಲಿದೆಯೇ ಸ್ಪಷ್ಟೀಕರಿಸಿ. –
ಮೋಹನ ಬಿನ್ನಾಳ, ಜೆಡಿಎಸ್ ತಾಲೂಕು ಅಧ್ಯಕ್ಷ