Advertisement

ಮುಖ್ಯ ರಸ್ತೆ ಅವ್ಯವಸ್ಥೆ: ತಪ್ಪದ ಅಪಘಾತ

09:22 PM Jul 02, 2019 | Team Udayavani |

ಬೇಲೂರು: ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣಗೊಳಿಸುವಂತೆ ದಶಕಗಳಿಂದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿರುವುದರಿಂದ ದಿನ ನಿತ್ಯ ಸಂಚಾರ ಅಸ್ತ ವ್ಯಸ್ತ ಗೊಂಡು ಅನೇಕ ಅಪಘಾತಗಳು ಸಂಭವಿಸುವಂತಾಗಿದೆ.

Advertisement

ಬೇಲೂರು ಪ್ರವಾಸಿ ಕೇಂದ್ರವಾಗಿದ್ದು ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು ಪ್ರತಿ ದಿನ ಶ್ರೀಚನ್ನಕೇಶಕೇಶವ ದೇವಾಲಯ ವೀಕ್ಷಿಸಲು ಆಗಮಿಸುತ್ತಾರೆ.

ಕಿರಿದಾದ ಮುಖ್ಯ ರಸ್ತೆ: ಪಟ್ಟಣದ ಮುಖ್ಯ ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ತುಂಬಾ ಅಡಚಣೆಯಾಗಿದೆ. ಕೆಲವೊಮ್ಮೆ ಮಳೆಗಾಲದಲ್ಲಿ ಶಿರಾಡಿ ಘಾಟ್‌ ಬಂದ್‌ ಆದಾಗ ಭಾರೀ ತೂಕದ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಚಾರ್ಮಾಡಿ ಘಾಟ್‌ ಮೂಲಕ ಸಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ಪ್ರವಾಸಿಗರು ವಾಹನ ದಟ್ಟಣೆಯಿಂದ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.

ರಸ್ತೆ ಅಗಲೀಕರಣಕ್ಕೆ ಅಡ್ಡಿ: ಈ ಹಿಂದೆ ಪುರಸಭೆಯವರು ರಸ್ತೆ ಅಗಲೀಕರಣ ಮಾಡಲು ರಸ್ತೆಯ ಮಧ್ಯದಿಂದ ಅಳತೆ ಮಾಡಿ ಅಂಗಡಿ ಮಳಿಗೆಗಳಿಗೆ ಬಣ್ಣದಿಂದ ಮಾರ್ಕ್‌ ಮಾಡಿದ್ದರು. ಬಳಿಕ ರಾಜಕೀಯ ಒತ್ತಡಕ್ಕೆ ಮಣಿದು ರಸ್ತೆ ಅಗಲೀಕರಣದ ಯೋಜನೆಯನ್ನೆ ಕೈಬಿಟ್ಟಿ ಕುಳಿತರು.

ಸಚಿವರಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣನವರಿಗೆ ಸಾರ್ವಜನಿಕರು ಸಂಘ ಸಂಸ್ಥೆಗಳು ಕಳೆದ 10 ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವಂತೆ ಮನವಿ ನೀಡುತ್ತಾ ಬಂದಿದರೂ ಪ್ರಯೋಜನವಾಗಿಲ್ಲ.

Advertisement

ಸಂಸದರ ಮೌನ: ನೂತನವಾಗಿ ಆಯ್ಕೆಯಾಗಿರುವ ಸಂಸದ‌ ಪ್ರಜ್ವಲ್‌ ರೇವಣ್ಣ ಅವರಿಗೂ ಮನವಿ ಮಾಡಿದಾಗ ಲೋಕಸಭಾ ಚುನಾವಣೆಯ ನಂತರ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸುವ ಭರವಸೆ ನೀಡಿದ್ದರು ಅದರೆ ಇದವರೆಗೂ ಈ ಬಗ್ಗೆ ಚಕಾರವೆತ್ತಿಲ್ಲ.

ಜೆ.ಪಿ.ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ: ಪಟ್ಟಣದ ನೆಹರೂ ನಗರ ಹಾಗೂ ಜೆ.ಪಿ.ನಗರಗಳ ಸರ್ಕಲ್‌ಗ‌ಳಲ್ಲಿ ಸಂಚಾರ ದಟ್ಟಣೆ ಇದ್ದು ಅನೇಕ ಶಾಲಾ ಕಾಲೇಜುಗಳಲ್ಲಿ ಸಾವಿರಾರು ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದು ವಾಹನಗಳ ಅತಿವೇಗ ಹಾಗೂ ದಟ್ಟಣೆಯಿಂದ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸಾರಿ ಈ ಭಾಗಗಳಲ್ಲಿ ಅಪಘಾತ ನಡೆದು ಸಾವು ಸಂಭವಿಸುತ್ತಿದ್ದರೂ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ.

ಜನ ಪ್ರತಿನಿಧಿಗಳ ನಿರಾಸಕ್ತಿ: ಅಭಿವೃದ್ಧಿ ಬಗ್ಗೆ ಮಾತನಾಡುವ ತಾಲೂಕು ಜನಪ್ರತಿನಿಧಿಗಳು ರಸ್ತೆ ಅಗಲೀಕರಣ ಬಗ್ಗೆ ಜಿಲ್ಲೆಯವರೇ ಅದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಲೋಕೋಪಯೊಗಿ ಸಚಿವ ಎಚ್‌.ಡಿ.ರೇವಣ್ಣನವರ ಹತ್ತಿರ ಈ ಬಗ್ಗೆ ಸಮಾಲೋಚನೆ ನಡೆಸಿ ರಸ್ತೆ ಅಗಲೀಕರಣ ಗೊಳಿಸಲು ಮುಂದಾಗದಿರುವ ಬಗ್ಗೆ ಸಾರ್ವಜನಿಕರು ಸ್ಥಳೀಯ ನಾಯಕರ ವಿರುದ್ಧ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ರಸ್ತೆಗಳು ಸಮಗ್ರ ಅಭಿವೃದ್ಧಿಯಾಗುತ್ತಿವೆ ಎನ್ನುವ ಸಚಿವ ಎಚ್‌.ಡಿ.ರೇವಣ್ಣ ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬೇಲೂರು ಮುಖ್ಯ ರಸ್ತೆಯನ್ನು ಅಗಲೀ ಕರಣಗೊಳಿಸಲು ಏಕೆ ವಿಳಂಬ ದೋರಣೆ ಹೊಂದಿದ್ದಾರೆ ಎಂಬ ಬಗ್ಗೆ ನಾಗರಿಕರಲ್ಲಿ ಪ್ರಶ್ನೆ ಮೂಡುತ್ತಿದೆ.

ಸಾರ್ವಜನಿಕರಿಗೆ ಸಂಕಷ್ಟ: ಪಟ್ಟಣದಲ್ಲಿ ಮುಖ್ಯ ರಸ್ತೆ ಪ್ರಮುಖವಾಗಿದ್ದು, ಈ ರಸ್ತೆಯಲ್ಲಿ ಪ್ರತಿಭಟನೆ ಅಥವ ಇನ್ನಾವುದೋ ಮೆರವಣಿಗೆ ನಡೆದರೆ ಪ್ರಮುಖ ಬೀದಿಯಲ್ಲಿ ಸಾಗುವ ವಾಹನಗಳು ಗಂಟೆ ಗಟ್ಟಲೆ ನಿಲ್ಲುವ ಪರಿಸ್ಥಿತಿ ಇದ್ದು ಪ್ರಯಾಣಿಕರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ರಸ್ತೆ ಅಭಿವೃದ್ಧಿಗೆ ಕ್ರಮ: ಪಟ್ಟಣದ ರಸ್ತೆ ಅಗಲೀಕರಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ನೆಹರು ನಗರದಿಂದ ದೇವಾಲಯದವರೆ ಗೆ ಡಿವೈಡರ್‌ ಮಾಡಿ ಬೇಲೂರು ಪಟ್ಟಣದವನ್ನು ಸೌಂಧರ್ಯವಾಗಿಡಲು ಯೊಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಯ ಬಗ್ಗೆ ಸಚಿವ ಎಚ್‌.ಡಿ.ರೇವಣ್ಣ ಅವರ ಹತ್ತಿರ ಮಾತನಾಡಿದ್ದು, ಸ್ಥಳೀಯ ಅಂಗಡಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಪಟ್ಟಣದ ಮುಖ್ಯ ರಸ್ತೆ ಅಲ್ಲದೇ ಪರ್ಯಾಯವಾಗಿ ಹೊಳೆ ಬೀದಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಯಗಚಿ ನದಿಗೆ ಅಡ್ಡಲಾಗಿ ಸೇತುವ ನಿರ್ಮಾಣ ಮಾಡಲು 15 ಕೋಟಿ ರೂ. ಬಿಡುಗಡೆಯಾಗಿದೆ. ಪಟ್ಟಣದ ಹೊಳೆಬೀದಿ ಮತ್ತು ಮುಖ್ಯ ರಸ್ತೆ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.

ರಸ್ತೆ ಅಭಿವೃದ್ಧಿ ಪಡಿಸದ್ದಿದರೆ ಹೋರಾಟ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕಾಗಿ ಸಂಘ ಸಂಸ್ಥೆಗಳು ಹಲವು ಬಾರಿ ಮನವಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲೂಕು ಕರವೇ ಅಧ್ಯಕ್ಷ ಭೋಜೇಗೌಡ ಆಪಾದಿಸಿದ್ದಾರೆ. ಪಟ್ಟಣದಲ್ಲಿ ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆ ದಾಟಲು ಹರ ಸಾಹಸ ಪಡುವಂತಾಗಿದ್ದು ವಾಹನಗಳ ದಟ್ಟಣೆ ತಗ್ಗಿಸಲು ರಸ್ತೆ ಅಗಲೀಕರಣ ಮಾಡುವುದು ಅಗತ್ಯವಾಗಿದೆ.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಅಂಗಡಿಗಳನ್ನು ನಡೆಸುತ್ತಿರುವ ಮಾಲೀಕರಿಗೆ ಕಟ್ಟಡ ಪರಿಹಾರ ನೀಡಿ ರಸ್ತೆ ಅಗಲೀಕರಣಗೊಳಿಸಲು ಸರ್ಕಾರ ಮುಂದಾಗುವುದು ಅವಶ್ಯಕವಾಗಿದ್ದು ಇನ್ನಾದರೂ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

* ಡಿ.ಬಿ.ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next