Advertisement

ಸಾಂತ್ವನ ಯೋಜನೆಗೆ ಸರಕಾರದ ಸಾಂತ್ವನ

01:45 AM May 19, 2020 | Sriram |

ಉಡುಪಿ: ರಾಜ್ಯ ಸರಕಾರದ ಮೇ 11ರ ಸುತ್ತೋಲೆಯಂತೆ ಕೇಂದ್ರ ಪುರಸ್ಕೃತ ಯೋಜನೆಯಡಿ ಒನ್‌ಸ್ಟಾಪ್‌ ಸೆಂಟರ್‌ಗಳನ್ನು ಪ್ರಾರಂಭಿಸುವುದರಿಂದ ಮಹಿಳಾ ಸಾಂತ್ವನ ಯೋಜನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಮುಂದುವರಿಯುವ ಸಾಧ್ಯತೆ ಇದೆ.

Advertisement

ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಸ್ಥಗಿತಗೊಳಿಸಿದರೆ ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬಂದಿಗೆ ತೊಂದರೆಯುಂಟಾಗಲಿದೆ. ಲಾಕ್‌ಡೌನ್‌ ಸಮಯದಲ್ಲಿಯೇ ಕೆಲಸ ಕಳೆದುಕೊಂಡರೆ ಮತ್ತಷ್ಟು ಹೊರೆಯಾಗಲಿದೆ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಮುನ್ಸೂ ಚನೆ ಇದೆ.

20 ವರ್ಷಗಳಿಂದ ನಿರಂತರ ಚಟುವಟಿಕೆ
ವರದಕ್ಷಿಣೆ ಕಿರುಕುಳ, ಲೈಂಗಿಕ ಹಲ್ಲೆ, ಕೌಟುಂಬಿಕ ಸಮಸ್ಯೆ ಹಾಗೂ ಪುರುಷನಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರವು 2001-02ರಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿಯನ್ನು ಜಿಲ್ಲಾ ಕೇಂದ್ರಗಳಲ್ಲಿ, ಅನಂತರ ತಾಲೂಕು ಮಟ್ಟ ದಲ್ಲಿ ಆರಂಭಿಸಿತ್ತು. ಪ್ರತೀ ಕೇಂದ್ರಗಳು ತಿಂಗಳಲ್ಲಿ 15-20 ಹೊಸ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಲ್ಲದೆ 250ರಿಂದ 300 ಕರೆಗಳ ಮೂಲಕ ನೊಂದ ಮಹಿಳೆ ಯರನ್ನು ಸಂತೈಸಿ ಅನ್ಯೋನ್ಯವಾಗಿ ಜೀವಿಸುವಂತೆ ಮಾಡಿವೆ.

ನೊಂದ ಜೀವಗಳಿಗೆ
ಬದುಕು ಕೊಟ್ಟ ಕೇಂದ್ರ
“ಸಾಂತ್ವನ’ ಪಡೆದ ಅದೆಷ್ಟೋ ಮಹಿಳೆಯರು ಕೇಂದ್ರವನ್ನು ತಮ್ಮ ಬದುಕು ರೂಪಿಸಿದ ತವರು ಮನೆ ಎಂದೇ ಭಾವಿಸುತ್ತಿದ್ದು, ಆಗಾಗ ಬಂದು ಸಿಬಂದಿಯೊಂದಿಗೆ ಸುಖ-ದುಃಖ ಹಂಚಿಕೊಂಡು ಹೋಗುತ್ತಿದ್ದಾರೆ. ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯರ ಬದುಕನ್ನು ಮತ್ತೆ ಕಟ್ಟಿಕೊಡುವುದಲ್ಲದೆ, ಆತ್ಮಹತ್ಯೆಗೆ ಮುಂದಾದ ಹೆಣ್ಣು ಮಕ್ಕಳಲ್ಲಿ ಧೈರ್ಯ ತುಂಬಿ ದಾನಿಗಳಿಂದ ಧನಸಹಾಯದ ಮೂಲಕ ಉನ್ನತ ವಿದ್ಯಾಭ್ಯಾಸ ಕಲ್ಪಿಸಿರುವ ಉದಾಹರಣೆಗಳೂ ಇವೆ. ಪತಿ ಇನ್ನೊಂದು ಮದುವೆಯಾಗಲು ಹೊರಟಾಗ ಮಕ್ಕಳೊಂದಿಗೆ ಆಶ್ರಯ ಬೇಡಿ ಬಂದಾಕೆಗೆ ಕೇಂದ್ರದಲ್ಲಿಯೇ ವಸತಿ ಕಲ್ಪಿಸಿ ಪತಿಯ ವಿರುದ್ಧ ದಾವೆ ಹೂಡಿ ಮಕ್ಕಳನ್ನು ಎಂಜಿನಿಯರ್‌ಗಳಾಗಿಸಿದ ಉದಾಹರಣೆಗಳೂ ಇವೆ. ಅಸಹಾಯಕರಾಗಿ ಅಲೆಯುತ್ತಿದ್ದ ಮಹಿಳೆಯರನ್ನು ರಕ್ಷಿಸಿ ಅವರಿಗೆ ಚಿಕಿತ್ಸೆ ಹಾಗೂ ಸಾಂತ್ವನ ನೀಡಿ ಮನೆಯವರ ವಶಕ್ಕೊಪ್ಪಿಸಿದ ಅಥವಾ ಆಶ್ರಯ ಕಲ್ಪಿಸಿದ ಹಲವಾರು ಘಟನೆಗಳಿವೆ.

ಸಾಂತ್ವನ ಯೋಜನೆ ಸ್ಥಗಿತವಾದರೆ ಇಷ್ಟು ವರ್ಷ ಮಹಿಳೆಯರ ಅಳಲಿಗೆ ಸ್ಪಂದಿಸಿದ ಸಿಬಂದಿಗೆ ನಿರುದ್ಯೋಗ ಭೀತಿ ಕಾಡಲಿದೆ. ಯೋಜನೆಯನ್ನು ಮುಂದುವರಿಸುವಂತೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
– ಸರಳಾ ಬಿ. ಕಾಂಚನ್‌
ಅಧ್ಯಕ್ಷರು, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ

Advertisement

ರಾಜ್ಯ ಸರಕಾರವು ಕೇಂದ್ರ ಪುರಸ್ಕೃತ ಯೋಜನೆಯಡಿ ಒನ್‌ಸ್ಟಾಪ್‌ ಸೆಂಟರ್‌ಗಳನ್ನು ಪ್ರಾರಂಭಿಸುವುದರಿಂದ ಸಾಂತ್ವನ ಯೋಜನೆಯನ್ನು 2020-21ನೇ ಸಾಲಿನಿಂದ ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಮಹಿಳಾ ಸಂಘಟನೆಗಳ ಸಹಿತ ಹಲವರ ಮನವಿಯ ಹಿನ್ನೆಲೆಯಲ್ಲಿ ಮುಂದುವರಿಸುವ ಮಾತುಕತೆ ನಡೆಯುತ್ತಿದೆ.
– ಕೆ.ಎ. ದಯಾನಂದ
ನಿರ್ದೇಶಕರು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು

ಒನ್‌ಸ್ಟಾಪ್‌ ಸೆಂಟರ್‌
ನೊಂದ ಮಹಿಳೆಗೆ ಏಕಕಾಲಕ್ಕೆ ವಸತಿ, ಊಟ, ಕೌನ್ಸೆಲಿಂಗ್‌, ಚಿಕಿತ್ಸೆ ಹಾಗೂ ರಕ್ಷಣೆ ಬೇಕಿರುತ್ತದೆ. ಒಂದೊಂದು ಸೇವೆಗೂ ಬೇರೆ ಬೇರೆ ಕೇಂದ್ರಗಳ ಮೊರೆಹೊಗುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ಒನ್‌ಸ್ಟಾಪ್‌ ಸೆಂಟರ್‌ ಕಾರ್ಯಾಚರಿಸುತ್ತಿದೆ.
ಸಹಾಯವಾಣಿ: 181
ಸಾಂತ್ವನ ಸಹಾಯವಾಣಿ – 1515

Advertisement

Udayavani is now on Telegram. Click here to join our channel and stay updated with the latest news.

Next