ಉಳ್ಳಾಗಡ್ಡಿ ಖಾನಾಪೂರ: ಹುಕ್ಕೇರಿ ತಾಲೂಕಿನ ಹೆಬ್ಟಾಳ ಗ್ರಾಮದ ರೈತ ಮಹೇಶ ಗುರುಲಿಂಗಯ್ನಾ ಹಿರೇಮಠ ಕೇವಲ 20 ಗುಂಟೆ ಕೃಷಿ ಭೂಮಿಯಲ್ಲಿ ಟೊಮೆಟೊ ಬೆಳೆದು ಸುಮಾರು 12.5 ಲಕ್ಷ ರೂ ಗಳಷ್ಟು ಆದಾಯ ಗಿಟ್ಟಿಸಿ ಹಿರಿಹಿರಿ ಹಿಗ್ಗಿದ್ದಾರೆ.
ಕಳೆದ ಸುಮಾರು 4 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿರುವ ರೈತ ಮಹೇಶ ಹಿರೇಮಠ ಈ ಬಾರಿಯೂ ಸುಮಾರು 20 ಗುಂಟೆ ಭೂಮಿಯಲ್ಲಿ ಮಾರ್ಚ್ ಪ್ರಾರಂಭದಲ್ಲೆ 3,700 ಟೊಮೆಟೊ ಸಸಿಗಳನ್ನು ನಾಟಿ ಮಾಡಿ, ಹೊಲದಲ್ಲಿನ ಕೊಳವೆ ಬಾವಿ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೆಳೆದಿದ್ದರು.
ಸುಮಾರು 45 ದಿನಗಳ ನಂತರ ಟೊಮೆಟೊ ಹಣ್ಣು ಕಟಾವಿಗೆ ಬಂದಾಗ ನಮಗೆ ನಿರೀಕ್ಷೆಗೂ ಮೀರಿ ಇಳುವರಿ ಹಾಗೂ ಬಂಗಾರದಂತಹ ಉತ್ತಮ ದರ ದೊರೆತಾಗ ಸಂತಸಕ್ಕೆ ಪಾರವೇ ಇರಲಿಲ್ಲ ಎನ್ನುತ್ತಾರೆ ರೈತ ಮಹೇಶ.
ಸಂಕೇಶ್ವರದ ಮಾರುಕಟ್ಟೆ: ಮೊದಲು 20 ಕಿಲೋ ಟೊಮೆಟೊಗೆ 700 ರಿಂದ 800 ರೂ ದರ ದೊರೆತರೆ ತದನಂತರ 1,700 ರೂ ಗಳಿಂದ 1,880 ರೂ ಗಳವರೆಗೆ ದರ ಸಿಗುತ್ತಿದೆ. ಈವರೆಗೆ ಸುಮಾರು 20.5 ಟನ್‌ಗಳಷ್ಟು ಇಳುವರಿ ಬಂದಿದ್ದು 12.5 ಲಕ್ಷ ರೂ.ವರೆಗೆ ಆದಾಯ ಗಳಿಸಿದ್ದಾರೆ. ತಿಂಗಳಾಂತ್ಯದವರೆಗೆ ಮತ್ತೆ 2 ಟನ್‌ಗಳಷ್ಟು ಇಳುವರಿ ಬರುವ ಸಾಧ್ಯತೆ ಇದೆ.
ವಿವಿಧ ಬೆಳೆ: ಸುಮಾರು 4 ಎಕರೆ ಕೃಷಿ ಭೂಮಿಯಲ್ಲಿ ಕುಟುಂಬದ ಸದಸ್ಯರ ಸಹಕಾರದ ಮೇರೆಗೆ ಕೃಷಿ ಕಾಯಕದಲ್ಲಿ ತೊಡಗಿದ್ದು 2 ಎಕರೆ ಭೂಮಿಯಲ್ಲಿ ಕಬ್ಬು, 1 ಎಕರೆ ಭೂಮಿಯಲ್ಲಿ ಮೆಣಸಿಣಕಾಯಿ, ತಲಾ ಅರ್ಧ ಎಕರೆ ಹಾಗಲಕಾಯಿ ಮತ್ತು ಟೊಮೆಟೊ ಬೆಳೆಯನ್ನು ಬೆಳೆಯುವ ಯೋಜನೆ ಹಾಕಿದ್ದು 4 ಎಕರೆಯಲ್ಲೆ ವಿವಿಧ ಬೆಳೆಗಳನ್ನು ಮಾಡಿದ್ದರಿಂದ ವಿಶೇಷವಾಗಿ ಟೊಮೆಟೊ ಬೆಳೆಗೆ ಸುಮಾರು 2 ಲಕ್ಷದವರೆಗೆ ಖರ್ಚು ಮಾಡಿದ್ದಾಗಿ ಹೇಳುವ ಮಹೇಶ, ಇದೇ ಬೆಳೆಯಿಂದು ನಮ್ಮ ಕೈ ಹಿಡಿದಿದೆ ಎನ್ನುತ್ತಾರೆ.
ಬಿಎ ಪದವೀಧರರಾದ ಮಹೇಶ ಸದ್ಯ ಕೃಷಿಯತ್ತ ಹೆಚ್ಚು ಗಮನ ಹರಿಸಿದ್ದು, ಗೊಟೂರ ಗ್ರಾಮದ ಕೃಷಿ ಸಲಹೆಗಾರರಾದ ಸುರೇಶ ಆಸೋದೆಯವರು ನಿರಂತರ ಮಾರ್ಗದರ್ಶನ ಮಾಡಿದ್ದಾಗಿ ಹೇಳುತ್ತಾರೆ.
*ಸಂಜೀವ ಮುಷ್ಠಗಿ