ಹುಬ್ಬಳ್ಳಿ: ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರೀಂ ಕೋರ್ಟ್ ಹಂತದಲ್ಲಿರುವುದರಿಂದ ನ್ಯಾಯಾಧಿಕರಣದ ತೀರ್ಪಿನನ್ವಯ ಅಧಿಸೂಚನೆ ಹೊರಡಿಸಲು ಬರುವುದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಅವಶ್ಯವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ಹೆಚ್ಚಿನ ನೀರು ಹಂಚಿಕೆ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿವೆ.
ಈ ಹಂತದಲ್ಲಿ ಅಧಿಸೂಚನೆ ಹೊರಡಿಸಲು ತಾಂತ್ರಿಕ ಅಡ್ಡಿಯುಂಟಾಗಿದೆ. ಈ ಹಿಂದೆ ಕಾವೇರಿ ನದಿ ವಿಚಾರದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ನಂತರ ಸುಪ್ರೀಂ ಕೋರ್ಟ್ ನಿರ್ದೇಶನ ಪಡೆದು ಅಧಿಸೂಚನೆ ಹೊರಡಿಸಲಾಗಿತ್ತು. ಮಹದಾಯಿ ವಿಚಾರದಲ್ಲಿ ಅಂತಹದ್ದೇ ಪ್ರಕ್ರಿಯೆ ಆಗಬೇಕಿದೆ. ಅಲ್ಲಿಯವರೆಗೂ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವುದು ಅವರ ಪರಮಾಧಿಕಾರ. ಇದನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ.
-ಜಗದೀಶ ಶೆಟ್ಟರ್, ಸಚಿವ