Advertisement

ಭವಿಷ್ಯದ ಮಂಗಳೂರಿಗೆ ಮಹಾಯೋಜನೆ-3

01:41 AM Jun 09, 2020 | Sriram |

ಮಹಾನಗರ: ಬೆಳೆಯುತ್ತಿರುವ ಮಂಗಳೂರು ನಗರದ ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯ ಲ್ಲಿಟ್ಟುಕೊಂಡು ಪ್ರಸ್ತುತ ಚಾಲ್ತಿಯಲ್ಲಿರುವ ಮಹಾ ಯೋಜನೆಯನ್ನು ಪರಿಷ್ಕರಿಸಿ ಹೊಸ ಮಾದರಿ ಮಹಾ ಯೋಜನೆಯನ್ನು ರೂಪಿಸಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ನೂತನ ಅಧ್ಯಕ್ಷ ರವಿಶಂಕರ್‌ ಮಿಜಾರ್‌ ಹೇಳಿದ್ದಾರೆ.

Advertisement

ಮೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿ ಸಿದ ಬಳಿಕ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಪ್ರಸ್ತುತ ಚಾಲ್ತಿಯಲ್ಲಿರುವ ಮಹಾ ಯೋಜನೆ – 2ರ ಅವಧಿಯು 2021ಕ್ಕೆ ಮುಕ್ತಾ ಯವಾಗಲಿದೆ. ಈ ಹಿನ್ನೆಲೆಯಲ್ಲಿ, ಮಹಾಯೋಜನೆ-3 ರೂಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಭವವಸೆ ನೀಡಿದರು.

ತ್ವರಿತ ಸೇವೆಗೆ ಕ್ರಮ
ಸಾರ್ವಜನಿಕರಿಂದ ವಿವಿಧ ಕಾರ್ಯಗಳಿಗೆ ಮೂಡಾ ಕಚೇರಿಗೆ ಅರ್ಜಿಗಳು ಬರುತ್ತವೆ. ವಿಳಂಬವಿಲ್ಲದೆ ಅವರಿಗೆ ತ್ವರಿತವಾಗಿ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸೇವೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಹಾಗೂ ತ್ವರಿತ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಡಿಜಿಟಲೈಸೇಷನ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನೂತನ ಅಧ್ಯಕ್ಷರು ವಿವರಿಸಿದರು.

ನೂತನ ಬಡಾವಣೆಗಳು
ನನ್ನ ಅಧಿಕಾರಾವಧಿಯಲ್ಲಿ ಅತಿಹೆಚ್ಚು ವಸತಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನರಹಿತರಿಗೆ ಹಂಚಿಕೆ ಮಾಡುವ ಧ್ಯೇಯ ಹೊಂದಿದ್ದೇನೆ. ಈಗಾಗಲೇ ಇರುವ ನೂತನ ಬಡಾವಣೆಗಳ ರಚನೆ ಪ್ರಕ್ರಿಯೆಗೆ ವೇಗ ನೀಡಲಾಗುವುದು. ಪ್ರಸ್ತುತ ಕೊಣಾಜೆ ಗ್ರಾಮದಲ್ಲಿ 13.50 ಎಕ್ರೆ ಪ್ರದೇಶದಲ್ಲಿ 116 ನಿವೇಶನಗಳಿರುವ ಬಡಾವಣೆ ನಿರ್ಮಾಣವಾಗುತ್ತಿದೆ. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲೆ ನಿವೇಶನಗಳನ್ನು ಹಂಚಿಕೆ ಮಾಡುವ ಕಾರ್ಯ ಪ್ರಾರಂಭಿಸಲಾಗುವುದು. ಚೇಳಾçರು ಗ್ರಾಮದಲ್ಲಿ ಅಂದಾಜು 45 ಎಕ್ರೆ ಪ್ರದೇಶದಲ್ಲಿ ಸುಮಾರು 709 ನಿವೇಶನಗಳ ಬಡಾವಣೆ ನಿರ್ಮಿಸುವ ಯೋಜನೆಗೆ ಈಗಾಗಲೇ ಸರಕಾರದ ಅನುಮೋದನೆ ಪಡೆಯಲಾಗಿದೆ. ಕೂಡಲೇ ಬಡಾವಣೆ ರಚಿಸುವ ಪ್ರಕ್ರಿಯೆ ಆರಂಭಿಸಲಾಗುವುದು. ಕುಂಜತ್ತಬೈಲ್‌ನಲ್ಲಿ 17 ಎಕ್ರೆ ಭೂಮಿ ಸ್ವಾಧೀನಪಡಿಸಿಕೊಂಡು ಬಡಾವಣೆ ರೂಪಿಸುವ ಪ್ರಸ್ತಾವನೆ ಇದೆ ಎಂದರು.

ಅಂತರ್ಜಲ ವೃದ್ಧಿ, ಕೆರೆಗಳ ಅಭಿವೃದ್ಧಿ
ಮಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಪ್ರಸ್ತುತ ಪ್ರಾಧಿಕಾರದಿಂದ 2 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 6 ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 10 ಕೆರೆಗಳ ಅಭಿವೃದ್ಧಿ ಆಗಬೇಕಾಗಿದೆ. ಆದ್ಯತೆ ಮೇರೆಗೆ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗು
ವುದು. ನದಿ ತಟಗಳನ್ನು ಕೂಡಾ ಅಭಿವೃದ್ಧಿಗೊಳಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

Advertisement

ಉಳ್ಳಾಲ ಸೇತುವೆ: ಕಬ್ಬಿಣ ಗ್ರಿಲ್‌ ಅಳವಡಿಕೆ
ಉಳ್ಳಾಲ ಸೇತುವೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ಗ್ರಿಲ್‌ಗ‌ಳನ್ನು ಅಳವಡಿಸುವ ಪ್ರಕ್ರಿಯೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಾರಂಭವಾಗಿದೆ. ಇದನ್ನು ಮುಂದಿನ 6 ತಿಂಗಳ ಅವಧಿಯೊಳಗೆ ಪೂರ್ತಿಗೊಳಿಸಲಾಗುವುದು ಎಂದರು.

ಉದ್ಯಾನವನ, ಹಸುರೀಕರಣಕ್ಕೆ ಕ್ರಮ
ಮಂಗಳೂರು ನಗರದಲ್ಲಿ ಉದ್ಯಾನವನಗಳ ಕೊರತೆ ಇದೆ. ಅದುದರಿಂದ ನಗರದಲ್ಲಿ ಉದ್ಯಾನವನಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದೇನೆ. ವಾರ್ಡ್‌ಗೊಂದು ಕಿರು ಉದ್ಯಾನವನಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು. ಇದೇ ರೀತಿ ಮಂಗಳೂರಿನಲ್ಲಿ ಹಸುರೀಕರಣ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಪ್ರಸ್ತುತ ಲೆಕ್ಕಾಚಾರದಂತೆ ಮಂಗಳೂರು ಶೇ. 25ರಷ್ಟು ಹಸುರೀಕರಣ ಹೊಂದಿದೆ. ರಾಷ್ಟ್ರೀಯ ಮಾನದಂಡದಂತೆ ಇದು ಶೇ. 33 ಇರಬೇಕು.

3 ಕಡೆ ಟೆಕ್ನಾಲಜಿ ಪಾರ್ಕ್‌
ಮಂಗಳೂರು ಹಾಗೂ ಜಿಲ್ಲೆಯ ಯುವ ಸಮುದಾಯ ಇಲ್ಲೇ ಉದ್ಯೋಗಾವಕಾಶ ಹೊಂದಲು ಪ್ರಾಧಿಕಾರದ ವತಿಯಿಂದ ಪೂರಕ ಯೋಜನೆ ರೂಪಿಸುವ ಚಿಂತನೆ ಹೊಂದಿದ್ದೇನೆ. ಮಂಗಳೂರಿಗೆ ಕಂಪೆನಿಗಳನ್ನು ಆಕರ್ಷಿಸಲು ಪ್ರಾಧಿಕಾರ ವ್ಯಾಪ್ತಿಯ ದಕ್ಷಿಣ, ಉತ್ತರ ಹಾಗೂ ಪೂರ್ವ ಭಾಗದಲ್ಲಿ ಮೂರು ಟೆಕ್ನಾಲಜಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ರವಿಶಂಕರ್‌ ಮಿಜಾರ್‌ ವಿವರಿಸಿದರು.

 ಸಮಗ್ರ ಅಭಿವೃದ್ಧಿ
ನನ್ನನ್ನು ಮೂಡಾ ಅಧ್ಯಕ್ಷರಾಗಿ ನೇಮಕ ಮಾಡಿದ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರಿಗೆ ಆಭಾರಿಯಾಗಿದ್ದೇನೆ. ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ನಗರದ ಶಾಸಕರು, ಮಹಾನಗರ ಪಾಲಿಕೆ, ಮಂಗಳೂರು ಸ್ಮಾರ್ಟ್‌ ಸಿಟಿ ಕಂಪೆನಿಯೊಂದಿಗೆ ಸಮನ್ವಯತೆ ಸಾಧಿಸಿಕೊಂಡು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.
-ರವಿಶಂಕರ್‌ ಮಿಜಾರ್‌ಮೂಡಾ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next