ಮಂಗಳೂರು: ಮಹಾತ್ಮ ಗಾಂಧಿ ಕೇವಲ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿತ್ವ ಅಲ್ಲ. ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ತತ್ವ ಬೋಧಿಸಿದ ಮಹಾನ್ ಚೇತನ. ಅವರ ಚಿಂತನೆ, ವಿಚಾರಧಾರೆ ಸರ್ವ ಕಾಲಕ್ಕೂ ಪ್ರಸ್ತುತ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ದ. ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರ ಕುದು¾ಲ್ ರಂಗರಾವ್ ಪುರಭವನದ ಎದುರು ಗಾಂಧಿ ಪ್ರತಿಮೆಯ ಬಳಿ ಬುಧವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಗಾಂಧೀಜಿ ಅವರ ಮಾನವೀಯತೆ, ಶಾಂತಿ ಸಂದೇಶ, ಅವರ ಆತ್ಮವಿಶ್ವಾಸ, ಸ್ವಯಂಶಿಸ್ತಿನ ಮೂಲಕ ದೇಹದ ಬಲಕ್ಕಿಂತ ಮನಸ್ಸಿನ ಬಲವೇ ಹೆಚ್ಚು ಎನ್ನುವುದನ್ನು ತೋರಿಸಿದರು. ದೇಶ- ವಿದೇಶದ ಪ್ರತಿಯೊಬ್ಬ ನಾಯಕರು ಕೂಡ ಗಾಂಧೀಜಿ ಚಿಂತನೆಯಿಂದ ಪ್ರೇರಣೆಗೊಂಡಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಡಾ| ಆನಂದ್ ಕೆ., ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿಎಲ್., ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಉಪ ನಿರ್ದೇಶಕ ರಾಜೇಶ್ ಕುಮಾರ್, ಭಾರತ ಸೇವಾದಳದ ಜಯರಾಮ ರೈ, ಬಶೀರ್ ಬೈಕಂಪಾಡಿ, ಮಂಜೇಗೌಡ, ಟಿ.ಕೆ. ಸುಧೀರ್, ಪ್ರಭಾಕರ್ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಚ್ಛತಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ವಿತರಿಸಲಾಯಿತು. ಸ್ವತ್ಛತಾ ಪ್ರಮಾಣವಚನ ಸ್ವೀಕರಿಸಲಾಯಿತು.