Advertisement
ಹಣೆಯಲ್ಲಿ ಅರ್ಧ ಚಂದ್ರನನ್ನು ನೆಟ್ಟ, ಕೊರಳಲ್ಲಿ ಹಾವನ್ನು ಬಿಟ್ಟ, ತಲೆಯೆತ್ತಿದ ಭಂಗಿಯ ಶಿವನತ್ತ ನೆಟ್ಟ ಲಕ್ಷಾಂತರ ಕಣ್ಣುಗಳು. ಏಕತ್ರವಾಗಿ ಕಲೆತು ಶಿವ ಎನ್ನುವ ಏಕಸೂತ್ರದಿಂದ ಬಂಧಿಸಲ್ಪಟ್ಟು ಒಂದೇ ಮನಸಿನಿಂದ ಶಿವಧ್ಯಾನ ನಿರತರಾದವರು. ಝಗಮಗದ ದೀಪದ ಬೆಳಕಿನಲ್ಲಿ ಸೇರಿದ್ದ ಜನರಿಗೆ ಹುರುಪು, ಉತ್ಸಾಹ ಮೂಡಿಸಿ ಶಿವಧ್ಯಾನದ ನೆನಪು ಹುಟ್ಟಿಸಿದ ಕ್ಷಣ. ಧ್ಯಾನ ಎಂದರೆ ಮೌನವಲ್ಲ. ಅಮೂರ್ತ ಕ್ಷಣವಲ್ಲ. ಸದ್ಗುರುಗಳೇ ಹೆಜ್ಜೆ ಹಾಕಿ, ಹಾಡಿ ಇತರರಿಗೆ ಕುಣಿದು, ಕುಪ್ಪಳಿಸಿ ಮೈಮರೆಯಲು ಪ್ರೋತ್ಸಾಹ ನೀಡುತ್ತಾ ಜಾಗರದ ಜಾಗೃತಿ ಮೂಡಿಸಿದ ಘಳಿಗೆ.
ಭೂಮಿ ಮತ್ತು ಸೂರ್ಯನ ಬೆಳಕಿನ ಸಂಬಂಧ ವಿಶಿಷ್ಟವಾದುದು. ಸಮಸ್ತ ಜೀವಜಂತುಗಳಿಗೆ ಸ್ವಾಮಿಯಾದ ಶಿವ ಎಲ್ಲ ದೇವರಿಗಿಂತ ಭೂಮಿಗೆ ಹತ್ತಿರನಾಗಿದ್ದಾನೆ. ಈಗಿನ ಜನತೆ ತಮ್ಮ ಅಜ್ಞಾನದಿಂದ, ನಿರ್ಲಕ್ಷ್ಯದಿಂದ ಭೂಮಿಯನ್ನು ಹಾಳುಗೆಡವುತ್ತಿದೆ. ಭೂಮಿ-ಮಣ್ಣು ಉಳಿಸುವುದೇ ಶಿವರಾತ್ರಿಯ ಸಂಕಲ್ಪವಾಗಬೇಕು ಎಂದು ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.
Related Articles
Advertisement
ಪ್ರಸಿದ್ಧರ ಗಾನಗೀತವಿಶಾಲ ವೇದಿಕೆಯಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಸಮ್ಮೇಳನ ಭಜಕರನ್ನು ಹುಚ್ಚೆಬ್ಬಿಸಿ ಕುಣಿಸಿತು. ಪಾಪೊನ್‌ನಿಂದ ಜನಪ್ರಿಯರಾದ ಅಸ್ಸಾಂನ ಅಂಗರಾಗ್ ಮಹಾಂತ, ಬಾಲಿವುಡ್ ಭಕ್ತಿ ಗಾಯಕ ಮತ್ತು ಹಿನ್ನೆಲೆ ಗಾಯಕರಾದ, ಪಂಜಾಬಿ ಮತ್ತು ಸೂಫಿ ಸಂಗೀತದ ಮಾಸ್ಟರ್ ಸಲೀಂ, “ಡಮರು ವಾಲೆ ಬಾಬಾ’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಾಡಿನ ಹಂಸರಾಜ್ ರಘುವಂಶಿ, ರಾಬರ್ಟ್ ಸಿನೆಮಾದ “ಕಣ್ಣೇ ಎದಿರಂದಿ’ ಹಾಡಿನ ಗಾಯಕಿ ಆಂಧ್ರದ ಮಂಗ್ಲಿ ಎಂದು ಜನಪ್ರಿಯರಾಗಿರುವ ಸತ್ಯವತಿ ರಾಥೋಡ್, ತಮಿಳಿನ ಶಾನ್ ರೋಲ್ಡನ್ ಎಂದು ಜನಪ್ರಿಯರಾದ ರಾಘವೇಂದ್ರ ರಾಜಾ ರಾವ್ ಅವರ ಹಾಡುಗಳು ಸಂಗೀತಲೋಕದ ಕಡೆಗೆ ಧ್ಯಾನಸ್ಥರ ಮನಸ್ಸನ್ನು ಕೊಂಡೊಯ್ದವು. ಕರ್ನಾಟಕ, ಹಿಂದೂಸ್ಥಾನಿ, ಜನಪದ, ಸಿನೆಮಾ ಶೈಲಿ ಜನಮನರಂಜಿಸಿತು. ಭಾವಪರವಶ
“ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಹುಟ್ಟಿ ನಾಳೆ ಅಳಿಯುವ ನಾವು ಮಣ್ಣನ್ನು ನಾಶ ಮಾಡುತ್ತಿದ್ದೇವೆ. ಈಗಾಗಲೇ ಮಣ್ಣಿನಲ್ಲಿ ಇರುವ ಶೇ. 40 ಕಡಿಮೆ ಆಹಾರ ಬೆಳೆಯುತ್ತಿದ್ದು, ಎಂಟು ತಿಂಗಳಿಂದ ಮಣ್ಣು ಉಳಿಸುವ ಸಲುವಾಗಿ ಅಭಿಯಾನ ನಡೆದಿದೆ. ಪ್ರಪಂಚದ ಎಲ್ಲ ದೇಶಗಳ, 730 ರಾಜಕೀಯ ಪಕ್ಷಗಳ ಬೆಂಬಲ ಕೇಳಲಾಗಿದೆ. ಮಾ. 21ಕ್ಕೆ ಲಂಡನ್‌ನಿಂದ, ಒಬ್ಬನೇ ಬೈಕ್‌ನಲ್ಲಿ ಕಾವೇರಿ ಉಳಿಸಲು 30 ಸಾವಿರ ಕಿ.ಮೀ. 100 ದಿನ, 27 ದೇಶಗಳ ಯಾತ್ರೆ ನಡೆಸಿದಂತೆ ಮಣ್ಣು ಉಳಿಸಲು ಅಭಿಯಾನ ಕೈಗೊಳ್ಳಲಿದ್ದೇನೆ. ಪ್ರತಿದಿನ 10 ನಿಮಿಷ ಮಣ್ಣು ಉಳಿಸಲು ಜಾಲತಾಣದಲ್ಲಿ ಜಾಗೃತಿ ಮೂಡಿಸಿ’ ಎಂದು ಹೇಳಿ ಕೈಮುಗಿದ ಸದ್ಗುರುಗಳಿಗೆ ಭಾವಪರವಶರಾಗಿ ಕೆಲವು ಕ್ಷಣ ಮಾತು ಮುಂದುವರಿಸಲು ಸಾಧ್ಯ ಆಗಲೇ ಇಲ್ಲ. ರುದ್ರಾಕ್ಷ ದೀಕ್ಷೆ
ಶಿವರಾತ್ರಿಗೆ ಆನ್‌ಲೈನ್ ಅಥವಾ ವೈಯಕ್ತಿಕವಾಗಿ ಸೇರಿದ ಜನರಿಗೆ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ರುದ್ರಾಕ್ಷವನ್ನು ಸ್ವೀಕರಿಸಲು ಅವಕಾಶ ನೀಡಲಾಗಿತ್ತು. ವಿಶೇಷವಾಗಿ ಪ್ರತಿಷ್ಠಾಪಿಸಲಾದ 5 ದಶಲಕ್ಷಕ್ಕಿಂತಲೂ ಹೆಚ್ಚು ರುದ್ರಾಕ್ಷ ಮಣಿಗಳನ್ನು ದೇಶಾದ್ಯಂತ ಉಚಿತವಾಗಿ ವಿತರಿಸಲು ಸಿದ್ಧಪಡಿಸಲಾಗಿತ್ತು. ಏಳು ದಿನಗಳು
ಈ ವರ್ಷ ಮಹಾ ಶಿವರಾತ್ರಿಯು ವಿಶೇಷವಾಗಿದೆ. ಮೊದಲ ಬಾರಿಗೆ, ಮಾ. 1ರ ರಾತ್ರಿ ಸಂಭ್ರಮಾಚರಣೆಯು, ಏಳು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಜೃಂಭಣೆಯಾಗಿ ಮಾ. 8ರಂದು ಕೊನೆಗೊಳ್ಳುತ್ತವೆ. -ಲಕ್ಷ್ಮೀ ಮಚ್ಚಿನ