ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆಯಲ್ಲಿ ಕನ್ನಡಿಗರು ಮುಂಬೈ ಬೇಡಿಕೆ ಇಟ್ಟಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಫುಲ್ ಅಲರ್ಟ್ ಆಗಿದ್ದು, ಮರಾಠಿ ಹೊರತುಪಡಿಸಿ ಶೇ.50ರಷ್ಟು ಬೇರೆಭಾಷೆ ಬಳಕೆ ಆಗುತ್ತಿರುವ ಗಡಿ ಭಾಗದ ಹಳ್ಳಿಗಳ ಪಟ್ಟಿ ನೀಡುವಂತೆ ಆದೇಶಿಸಿದೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಪಂವತಿಯಿಂದ ಎಲ್ಲ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ.ಮರಾಠಿ ಬಿಟ್ಟು ಕನ್ನಡ ಭಾಷೆ ಬಳಕೆ ಆಗುತ್ತಿರುವ ಹಳ್ಳಿಗಳ ಮಾಹಿತಿಯನ್ನು ಲಿಖೀತ ರೂಪದಲ್ಲಿ ನೀಡುವಂತೆ ಆದೇಶಿದೆ. ಗಡಿ ಭಾಗದಲ್ಲಿ ಮರಾಠಿ ಭಾಷೆ ಪ್ರಚಾರಮಾಡಲು ಉಪವಿಭಾಗಾ ಧಿಕಾರಿಯಿಂದ ಆದೇಶಬಂದಿದ್ದು, ಹೀಗಾಗಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಮರಾಠಿ ಹೊರತುಪಡಿಸಿ ಶೇ.50ಕ್ಕಿಂತ ಹೆಚ್ಚು ಇತರೆಭಾಷೆ ಬಳಕೆ ಆಗುತ್ತಿದ್ದರೆ, ಶಾಲೆಗಳಲ್ಲಿಯೂ ಇತರೆ ಭಾಷೆ ಬಳಸುತ್ತಿದ್ದರೆ ಅಂಥ ಗ್ರಾಮಗಳ ಬಗ್ಗೆ ಮಾಹಿತಿ ನೀಡುವಂತೆ ತಾಪಂ ಸೂಚನೆ ನೀಡಿದೆ.
ಉದ್ಧವ ಉದ್ಧಟತನ: ತಿಂಗಳ ಹಿಂದೆಯಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಕರ್ನಾಟಕದ ವಿರುದ್ಧವಿಷ ಕಾರಿದ್ದರು. ಗಡಿ ಭಾಗದ ಸಂಘರ್ಷದ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದರು. ಜತೆಗೆ ಮರಾಠಿಗರ ಹೋರಾಟದ ಇತಿಹಾಸ ಸಾರುವ ಸಾಕ್ಷéಚಿತ್ರ ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದರು. ಈಗ ಮತ್ತೆ ದಾಖಲೆ, ಮಾಹಿತಿ ಕ್ರೋಡೀಕರಿಸಲು ಸಜ್ಜಾಗಿದ್ದಾರೆ. ಮಹಾರಾಷ್ಟ್ರದ ಜತ್ತ ತಾಲೂಕು ಬಹುತೇಕ ಕನ್ನಡ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಆಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಈ ಭಾಗದಲ್ಲಿ ಕನ್ನಡ ಶಾಲೆಗಳೂ ಇವೆ. ಇಲ್ಲಿ ಕನ್ನಡ ಬಳಕೆ ಆಗುತ್ತಿರುವ ಬಗ್ಗೆ ಮಾಹಿತಿ ಕೇಳಲಾಗಿದೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಗ್ರಾಪಂಗಳಿಗೆ ಪತ್ರ ಬರೆದು ಲಿಖೀತ ರೂಪದಲ್ಲಿ ವರದಿ ನೀಡುವಂತೆ ಜತ್ತ ತಾಪಂ ಆದೇಶಿಸಿದೆ.
ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾ ಸರ್ಕಾರ:
ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಕನ್ನಡ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಮೊದಲಿನಿಂದಲೂ ಇದೆ. ಈಗ ಕನ್ನಡ ಬಳಸುತ್ತಿರುವಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಮರಾಠಿ ಭಾಷೆ ಪ್ರಚಾರಕ್ಕಾಗಿ ಅಲ್ಲಿನ ಸರ್ಕಾರ ವರದಿ ಕೇಳಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಅಲ್ಲಿನ ಸರ್ಕಾರ ತನ್ನ ಶಿವಸೇನೆಯ ಕಾರ್ಯಕರ್ತರನ್ನು ಬಿಟ್ಟಿತ್ತು. ಗಡಿಭಾಗದ ಶಿನೋಳಿ ಮೂಲಕ ದಾಟಿ ಬರುತ್ತಿದ್ದಾಗ ನಮ್ಮಪೊಲೀಸರು ತಡೆದು ಒಂದಿಂಚೂ ಒಳ ಬರದಂತೆ ಖಾಕಿ ಖದರ್ ತೋರಿಸಿದ್ದರು. ಒಂದು ತಿಂಗಳಿಂದಗಡಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಪೊಲೀಸರುನಿಗಾ ಇಟ್ಟಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಉಭಯ ರಾಜ್ಯದ ಪೊಲೀಸರು ಹಿಂದೆ ಸರಿದಿದ್ದಾರೆ.
ಸವದಿ ಏಟಿಗೆ ಕಂಗಾಲು: ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಡುತ್ತಿರುವುದನ್ನು ಸಹಿಸಿಕೊಳ್ಳಲು ಆಗದೇ ಮಹಾರಾಷ್ಟ್ರ ಸರ್ಕಾರ ನಡೆಸಿದ ಕಿತಾಪತಿಗೆ ತಿರುಗೇಟು ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇನ್ನು ಮುಂದೆ ಮುಂಬೈ ಕರ್ನಾಟಕಕ್ಕೆ ಸೇರಿಸಿಕೊಳ್ಳಲುನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ ಎಂದುಎಚ್ಚರಿಸಿದ್ದರು. ಇದೇ ಅಸ್ತ್ರವಾಗಿಟ್ಟುಕೊಂಡು ಗಡಿ ಭಾಗದ ಕನ್ನಡ ಪ್ರದೇಶಗಳ ಮೇಲೆ ಮಹಾ ಸರ್ಕಾರ ಕಣ್ಣಿಟ್ಟಿದೆ. ಕನ್ನಡ ಬಳಕೆ ಆಗುತ್ತಿರುವುದನ್ನು ಸಹಿಸಿಕೊಳ್ಳಲು ಆಗದ್ದಕ್ಕೆ ಬೇರೆಯವರ ತಟ್ಟೆಗೆ ಕೈ ಹಾಕುವ ಕೆಲಸ ಮಾಡುತ್ತಿದೆ.