Advertisement

ಮಹಾರಾಷ್ಟ್ರದಲ್ಲಿ ‘ಹಿಂದೂ ಓವೈಸಿ’ಹೊಸ ಚರ್ಚೆ : ತೀವ್ರ ವಾಗ್ಸಮರ

02:56 PM Apr 17, 2022 | Team Udayavani |

ಮುಂಬಯಿ : ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಲು ಒತ್ತಾಯಿಸುತ್ತಿರುವಂತೆಯೇ,ಅವರನ್ನು ಆಡಳಿತ ಪಕ್ಷವಾಗಿರುವ ಶಿವಸೇನೆ ‘ಹಿಂದೂ ಓವೈಸಿ’ ಎಂದು ಕರೆದಿದ್ದು, ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

Advertisement

ಮಹಾರಾಷ್ಟ್ರದಲ್ಲಿ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ನಡೆದಿವೆ. ಆದರೆ ಇಲ್ಲಿನ ಜನರು ಮತ್ತು ಪೊಲೀಸರು ಇಲ್ಲಿ ಶಾಂತಿ ಕಾಪಾಡಿದ್ದಾರೆ. ‘ಹೊಸ ಓವೈಸಿ’…’ರಾಜ್ಯದ ‘ಹಿಂದೂ ಓವೈಸಿ’ ಮೂಲಕ ರಾಮ ಮತ್ತು ಹನುಮಂತನ ಹೆಸರಿನಲ್ಲಿ ಗಲಭೆ ಎಬ್ಬಿಸುವ ಉದ್ದೇಶ ಕೆಲವರಿಗೆ ಇತ್ತು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿಕೆ ನೀಡಿದ್ದಾರೆ.

ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಯುಪಿ ಚುನಾವಣೆಯಲ್ಲಿ ಗೆಲ್ಲಲು ಎಐಎಂಐಎಂನ ಓವೈಸಿ ಬಿಜೆಪಿಗೆ ಮಾಡಿದ ಕೆಲಸವೇ ಮಹಾರಾಷ್ಟ್ರದ ‘ಹೊಸ ಹಿಂದೂ ಓವೈಸಿ’ಯಿಂದ ಬಿಜೆಪಿ ಕೇಳುತ್ತಿದೆ ಎಂದು ರಾವುತ್ ಕಿಡಿ ಕಾರಿದ್ದಾರೆ.

ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಉದ್ದೇಶಪೂರ್ವಕವಾಗಿ ದೇಶದ ವಾತಾವರಣವನ್ನು ಹಾಳು ಮಾಡಲಾಗುತ್ತಿದೆ. ರಾಮ ನವಮಿ ಮತ್ತು ಹನುಮ ಜಯಂತಿಯಂದು ಇಂತಹ ಘಟನೆಗಳು ಹಿಂದೆಂದೂ ಸಂಭವಿಸಿಲ್ಲ, ಈ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗಿತ್ತು ಎಂದು ರಾವುತ್ ಹೇಳಿದ್ದಾರೆ.

ರಾಜ್ ಠಾಕ್ರೆ ಕಿಡಿ

Advertisement

ಶಿವಸೇನೆ ಆರೋಪಕ್ಕೆ ಕಿಡಿಕಾರಿರುವ ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ, ನಮಗೆ ಮಹಾರಾಷ್ಟ್ರದಲ್ಲಿ ಗಲಭೆ ಬೇಡ. ಪ್ರಾರ್ಥನೆ ಸಲ್ಲಿಸುವುದನ್ನು ಯಾರೂ ವಿರೋಧಿಸಿಲ್ಲ. ಆದರೆ ಮುಸ್ಲಿಮರು ಇದನ್ನು ಧ್ವನಿವರ್ಧಕದಲ್ಲಿ ಮಾಡಿದರೆ, ನಾವೂ ಅದಕ್ಕೆ ಧ್ವನಿವರ್ಧಕಗಳನ್ನು ಸಹ ಬಳಸುತ್ತೇವೆ. ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು. ಮೇ 3 ರ ನಂತರ ಏನು ಮಾಡಬೇಕೆಂದು ನಾನು ನೋಡುತ್ತೇನೆ ಎಂದು ಗುಡುಗಿದ್ದಾರೆ.

ದೆಹಲಿ ಜಹಾಂಗೀರ್ಪುರಿ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಂತಹ ವಿಷಯಗಳಿಗೆ ಇದೇ ರೀತಿ ಉತ್ತರಿಸಬೇಕು ಎಂದು ನಾನು ಭಾವಿಸುತ್ತೇನೆ, ಇಲ್ಲದಿದ್ದರೆ, ಆ ಜನರಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ ಠಾಕ್ರೆ ಜೂನ್ 5 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.ಮೇ 1 ರಂದು ಸಾರ್ವಜನಿಕ ರ್‍ಯಾಲಿಯನ್ನು ಔರಂಗಾಬಾದ್‌ನಲ್ಲಿ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next