ಮಣಿಪಾಲ/ರಾಮನಗರ: ಒಕ್ಕಲಿಗರ ಕೋಟೆಯಲ್ಲಿ ಡಿಕೆ ಸಹೋದರರಿಗೆ ಗೆಲುವಾಗಿದೆ. ಇದುವರೆಗೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮುಖಭಂಗವಾಗಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದ ಸಿ.ಪಿ.ಯೋಗೇಶ್ವರ್ ಅವರು 25,357 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತಂದೆ ಗೆದ್ದಿದ್ದ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪುತ್ರ ನಿಖಿಲ್ ವಿಫಲರಾಗಿದ್ದಾರೆ.
ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದ ಸಿ.ಪಿ.ಯೋಗೇಶ್ವರ್ ಅವರು ಗೆದ್ದಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ದ ಸೋಲು ಕಂಡಿದ್ದ ಸೈನಿಕ ಯೋಗೇಶ್ವರ್ ಇದೀಗ ಅವರ ಪುತ್ರನ ವಿರುದ್ದ ಗೆಲುವಿನ ನಗೆ ಬೀರಿ ಸೇಡು ತೀರಿಸಿಕೊಂಡಿದ್ದಾರೆ. ಸತತ ಎರಡು ಸೋಲಿನ ಬಳಿಕ ಸಿಪಿವೈಗೆ ಗೆಲುವು ಸಿಕ್ಕಿದೆ.
ಗೆಲುವಿಗೆ ಕಾರಣವೇನು?
ಸಿಪಿವೈ ಗೆಲುವಿನ ಹಿಂದೆ ಹಲವು ವಿಚಾರಗಳು ಕೆಲಸ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಒಂದೆಡೆ ರಾಮನಗರದಿಂದ ಡಿಕೆ ಸುರೇಶ್ ಗೆ ಸೋಲು ಮತ್ತೊಂದೆಡೆ ಮಂಡ್ಯದಿಂದ ಕುಮಾರಸ್ವಾಮಿ ಗೆದ್ದು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಡಿಕೆ ಸಹೋದರರು ಸಕ್ರಿಯರಾಗಿದ್ದರು. ಚನ್ನಪಟ್ಟಣ ಕ್ಷೇತ್ರ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದ ಡಿಕೆ ಶಿವಕುಮಾರ್ ಲೋಕಸಭೆ ಫಲಿತಾಂಶದ ಬಳಿಕವೇ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದರು. ಕ್ಷೇತ್ರದಲ್ಲಿ 500 ಕೋಟಿ ರೂ ಅಭಿವೃದ್ದಿ ಕೆಲಸ ನಡೆಸಿದ ಡಿಕೆ ಶಿವಕುಮಾರ್ ಅವರು ತಾನೇ ಅಭ್ಯರ್ಥಿ ಎಂದು ಹೇಳಿ ಪ್ರಚಾರ ನಡೆಸುತ್ತಿದ್ದರು.
ಅಲ್ಲದೆ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದ ಬಳಿಕ ಅವರ ವೈಯಕ್ತಿಕ ವರ್ಚಸ್ಸು ಒಂದಷ್ಟು ಮತಗಳನ್ನು ಸೆಳೆದಿತ್ತು. ಅಲ್ಲದೆ ಒಕ್ಕಲಿಗ ಮತಗಳು ಸಿಪಿವೈ ಅವರ ಕೈಹಿಡಿದಿದೆ. ಸಿಪಿವೈ ಅವರು ಕಾಂಗ್ರೆಸ್ ಗೆ ಬಂದ ಬಳಿಕ ಮುಸ್ಲಿಂ ಮತಗಳು ಕೂಡಾ ಅವರಿಗೆ ಲಭ್ಯವಾಗಿದೆ.
ಮತ್ತೊಂದೆಡೆ ಈ ಬಾರಿ ಒಕ್ಕಲಿಗ ಮತಗಳು ಕುಮಾರಸ್ವಾಮಿ ಕುಟುಂಬದ ಕೈಹಿಡಿಯಲಿಲ್ಲ. ಕಳೆದ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರಿಗೆ 12 ಸಾವಿರ ಲೀಡ್ ನೀಡಿದ್ದ ಚನ್ನಪಟ್ಟಣ ಪಟ್ಟಣ ಭಾಗದಲ್ಲಿ ಈ ಬಾರಿ ಯೋಗೇಶ್ವರ್ ಅವರು 20 ಸಾವಿರ ಲೀಡ್ ಪಡೆದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಜಮೀರ್ ಕರಿಯ ಹೇಳಿಕೆಯ ವಿರುದ್ದ ಬಿಜೆಪಿ- ಜೆಡಿಎಸ್ ಪ್ರತಿಭಟನೆ, ನಿಖಿಲ್ ಕಣ್ಣೀರು, ದೇವೇಗೌಡರ ಪ್ರಚಾರ … ಯಾವುದೂ ಕೈ ಹಿಡಿಯಲಿಲ್ಲ.
ಒಕ್ಕಲಿಗ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಇದೀಗ ಡಿಕೆ ಶಿವಕುಮಾರ್ ಭಾರೀ ಮುನ್ನಡೆ ಸಾಧಿಸಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ರಾಮನಗರದ ನಾಲ್ಕೂ ವಿಧಾನಸಭೆ ಕ್ಷೇತ್ರಗಳಲ್ಲಿ ಇದೀಗ ಯಾವುದೇ ಜೆಡಿಎಸ್ ಶಾಸಕರಿಲ್ಲ.