ಮುಂಬಯಿ : ಮಹಾರಾಷ್ಟ್ರದ ಬದಲಾದ ರಾಜಕೀಯ ವಿದ್ಯಮಾನದಲ್ಲಿ ನ್ಯಾಶನಲ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಇಬ್ಬಾಗವಾಗಿದ್ದು, ಡಿಸಿಎಂ ಅಜಿತ್ ಪವಾರ್ ಅವರ ಬಣದ ನೂತನ ರಾಜ್ಯಾಧ್ಯಕ್ಷರಾಗಿ ಸುನಿಲ್ ತಟ್ಕರೆ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.
ಡಿಸಿಎಂ ಅಜಿತ್ ಪವಾರ್ ಮತ್ತು ಎನ್ ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಟ್ಕರೆ ಅವರನ್ನು ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದಾಗಿ ಘೋಷಿಸಿದರು. ನಾವು ಜಯಂತ್ ಪಾಟೀಲ್ ಅವರನ್ನು ಅವರ ಜವಾಬ್ದಾರಿಯಿಂದ ಮುಕ್ತಗೊಳಿಸುತ್ತಿದ್ದೇವೆ ಮತ್ತು ಅವರ ಸ್ಥಾನದಲ್ಲಿ ನಾನು ಸುನಿಲ್ ತಟ್ಕರೆ ಅವರನ್ನು ಎನ್‌ಸಿಪಿಯ ಮಹಾರಾಷ್ಟ್ರ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದೇನೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂದು ಕೇಳಿದಾಗ, “ಶರದ್ ಪವಾರ್ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಂಬುದನ್ನು ನೀವು ಮರೆತಿದ್ದೀರಾ?” ಎಂದು ಅಜಿತ್ ಪವಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಮ್ಮ ನಿರ್ಧಾರದ ಬಗ್ಗೆ ನಾವು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ತಿಳಿಸಿದ್ದೇವೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ. ಶರದ್ ಪವಾರ್ ಅವರು ನಮ್ಮ ಗುರು, ಆಶೀರ್ವಾದ ನೀಡುವಂತೆ ನಾವು ಅವರಿಗೆ ಕೈ ಜೋಡಿಸಿ ವಿನಂತಿಸುತ್ತೇವೆ ಎಂದು ಪಟೇಲ್ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆಗಾಗಿ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ ಅವರನ್ನು ಅನರ್ಹಗೊಳಿಸಲು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಮನವಿ ಮಾಡಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಜಿತ್ ಪವಾರ್ ಅವರ ಬಂಡಾಯವನ್ನು ಬೆಂಬಲಿಸಿದ ಸಂಸದ ಪ್ರಫುಲ್ ಪಟೇಲ್ ಮತ್ತು ಇತರ ನಾಲ್ವರು ನಾಯಕರನ್ನು ಈಗಾಗಲೇ ಉಚ್ಚಾಟಿಸಿದೆ.