ನವದೆಹಲಿ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿದಂತೆ 53 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಬಗ್ಗೆ ಸಲ್ಲಿಸಿದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಇದರ ಜತೆಗೆ, ಅನರ್ಹತೆಯ ನೋಟಸ್ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದು ಬೇಡ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನರ್ವೇಕರ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಸೋಮವಾರ ಸೂಚಿಸಿದೆ.
ಈ ಪ್ರಕರಣ ಹಲವು ವಿಚಾರಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಸಾಂವಿಧಾನಿಕ ನ್ಯಾಯಪೀಠ ರಚಿಸಬೇಕಾಗಿದೆ. ಹೀಗಾಗಿ, ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಲು ಕೊಂಚ ಸಮಯಾವಕಾಶ ಬೇಕಾಗಿದೆ. ಈ ಕಾರಣದಿಂದಾಗಿ ನ್ಯಾಯಪೀಠ ಸೂಚನೆ ನೀಡುವವರೆಗೆ ಅನರ್ಹತೆಯ ವಿಚಾರದ ಬಗ್ಗೆ ತೀರ್ಮಾನ ಪ್ರಕಟಿಸುವುದು ಬೇಡ ಎಂದು ಸೂಚಿಸಿತು.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದ ಪರ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ತಮ್ಮ ಕಕ್ಷೀದಾರರು ಸಲ್ಲಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಬೇಕು ಎಂದು ಅರಿಕೆ ಮಾಡಿಕೊಂಡರು. ಆದರೆ, ಅದನ್ನು ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿತು.
ಮುರ್ಮುಗೆ ಠಾಕ್ರೆ ಬಣದ ಬೆಂಬಲ?
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ವತಿಯಿಂದ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರಿಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಡೆಯಿರುವ ಶಿವಸೇನೆ ಸಂಸದರು ಬೆಂಬಲ ಘೋಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ತಮ್ಮ ನಾಯಕ ಉದ್ಧವ್ ಠಾಕ್ರೆಯವರಿಗೆ ಎಲ್ಲಾ ಶಿವಸೇನೆ ಸಂಸದರ ಪರವಾಗಿ ಗಜಾನನ ಕೀರ್ತಿಕರ್ ಪತ್ರ ಬರೆದಿದ್ದಾರೆ.