ಮುಂಬೈ: ಬರೋಬ್ಬರಿ 5000 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ನರ್ಸ್ ಒಬ್ಬರು, ಶಿಶುವಿಗೆ ಜನ್ಮವಿತ್ತ ಕೆಲವೇ ದಿನಗಳಲ್ಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಜ್ಯೋತಿ ಗಾವ್ಲಿ (38) ಎಂಬ ಹೆಸರಿನ ನರ್ಸ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಎರಡನೇ ಮಗುವನ್ನು ಗರ್ಭದಲ್ಲಿ ಹೊತ್ತಿದ್ದ ಅವರು ನವೆಂಬರ್ 1ರವರೆಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ.
ನ.2ರಂದು ಅವರಿಗೆ ಅದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ನಂತರ ಜ್ಯೋತಿ ಬೈಲ್ಯಾಟರಲ್ ನ್ಯುಮೋನಿಯಾದಿಂದ ಬಳಲಿದ್ದು, ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು ಬಿಜೆಪಿ ಸರ್ಕಾರಗಳ ಸಾಧನೆ: ಹೆಚ್.ಡಿ.ರೇವಣ್ಣ
ಹಿಂಗೋಲಿ ಆಸ್ಪತ್ರೆಗೆ ಸೇರುವ ಮುನ್ನ ಎರಡು ಆಸ್ಪತ್ರೆಗಳಲ್ಲಿ ಆರು ವರ್ಷ ಕೆಲಸ ಮಾಡಿದ್ದ ಜ್ಯೋತಿ ಇದುವರೆಗೆ ಸುಮಾರು 5 ಸಾವಿರದಷ್ಟು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದರು. ಆದರೆ ಅವರನ್ನು ನಾವಿಂದು ಬದುಕಿಸಿಕೊಳ್ಳಲು ಆಗಲಿಲ್ಲವೆಂದು ಆಸ್ಪತ್ರೆಯ ಅಧಿಕಾರಿಗಳು ನೋವಿನಿಂದ ಹೇಳಿಕೊಂಡಿದ್ದಾರೆ.