Advertisement

ಉದ್ಧವ್‌ ಠಾಕ್ರೆ ಶಸ್ತ್ರತ್ಯಾಗ: ವಿಶ್ವಾಸಮತ ಸಾಬೀತಿಗೆ ಮುನ್ನವೇ ಮಹಾ ಅಘಾಡಿ ಸರಕಾರ ಪತನ

02:53 AM Jun 30, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಬಂಡಾಯದ ಬಿರುಗಾಳಿಗೆ ಸಿಲುಕಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರ ಪತನಗೊಂಡಿದೆ.

Advertisement

ವಿಶ್ವಾಸಮತ ಸಾಬೀತಿಗೆ ಮುನ್ನವೇ ಸೋಲೊಪ್ಪಿಕೊಂಡ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಬುಧವಾರ ರಾತ್ರಿ 9.30ರ ವೇಳೆಗೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.

ಬಹು ಮತ ಸಾಬೀತಿಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲೇ ಈ ಕ್ಷಿಪ್ರ ಬೆಳ ವಣಿಗೆಗಳು ನಡೆದಿವೆ. ಹೀಗಾಗಿ ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದಲ್ಲಿ ಬಿಜೆಪಿಸರಕಾರ ರಚನೆ ಬಹುತೇಕ ಖಚಿತವಾಗಿದೆ.

ಸುಪ್ರೀಂನಲ್ಲಿ ಹಿನ್ನಡೆ
ಗುರುವಾರ ಬೆಳಗ್ಗೆಯೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಮಂಗಳವಾರ ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಉದ್ಧವ್‌ ಬಣಕ್ಕೆ ಬುಧ ವಾರ ರಾತ್ರಿ ವೇಳೆಗೆ ಸುಪ್ರೀಂ ಆಘಾತ ನೀಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಫೇಸ್‌ಬುಕ್‌ ಲೈವ್‌ ಮೂಲಕ ಮಹಾರಾಷ್ಟ್ರದ ಜನರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್‌ ಠಾಕ್ರೆ, “ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ಪ್ರಜಾಸತ್ತೆಯನ್ನು ಎಲ್ಲರೂ ಪಾಲಿಸಲೇಬೇಕು.

ನಾನು ಮುಖ್ಯಮಂತ್ರಿ ಹುದ್ದೆಗೆ ಮತ್ತು ಎಂಎಲ್‌ಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಘೋಷಿಸಿದರು. ಇದೇ ವೇಳೆ ಬಂಡಾಯವೆದ್ದ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, “ಆಟೋರಿಕ್ಷಾ, ಕೈಗಾಡಿ ಚಲಾಯಿಸುತ್ತಿದ್ದ ವ್ಯಕ್ತಿಗಳನ್ನು ನಾವು ಸಂಸದ, ಶಾಸಕ, ಸಚಿವರನ್ನಾಗಿ ಮಾಡಿದೆವು. ನಮ್ಮಿಂದ ಏನನ್ನು ನೀಡಲು ಸಾಧ್ಯವಿತ್ತೋ ಅವೆಲ್ಲವನ್ನೂ ಅವರಿಗೆ ನೀಡಿದೆವು. ನಾನು ಬಂಡಾಯ ಶಾಸಕರಲ್ಲಿ ಕೇಳುವುದಿಷ್ಟೇ- ನಿಮಗೆ ಯಾರ ಮೇಲೆ ಸಿಟ್ಟು? ನನ್ನ ಮೇಲೆಯೋ ಕಾಂಗ್ರೆಸ್‌ ಮೇಲೆಯೋ ಅಥವಾ ಎನ್‌ಸಿಪಿ ಮೇಲೆಯೋ? ಒಬ್ಬ ಶಿವಸೈನಿಕನಾಗಿ ನಾನು ನಿಮ್ಮೆಲ್ಲರನ್ನೂ ನನ್ನವರು ಎಂದು ಭಾವಿಸಿದ್ದೆ’ ಎಂದು ಹೇಳಿದರು.

Advertisement

ಇದೇ ವೇಳೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮತ್ತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಹೇಳಿದರು.

ಸಂಪುಟ ಸಭೆಯಲ್ಲಿ “ಹಿಂದುತ್ವ’ದ ಜಪ!
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಸಚಿವ ಸಂಪುಟ ಸಭೆ ಕರೆದಿದ್ದ ಸಿಎಂ ಉದ್ಧವ್‌ ಠಾಕ್ರೆ ಮಹತ್ವದ ನಿರ್ಧಾರ ಗಳನ್ನು ಪ್ರಕಟಿಸಿದ್ದರು. ಔರಂಗಾಬಾದ್‌ ಹೆಸರನ್ನು “ಸಂಭಾಜಿನಗರ’, ಉಸ್ಮಾನಾಬಾದನ್ನು “ಧಾರಾಶಿವ್‌’, ನವೀ ಮುಂಬಯಿ ಏರ್‌ ಪೋರ್ಟ್‌ ಹೆಸರನ್ನು ಬಾಳಾಸಾಹೇಬ್‌ ಠಾಕ್ರೆ ಏರ್‌ಪೋರ್ಟ್‌ ಬದಲಿಗೆ “ಡಿಬಿ ಪಾಟೀಲ್‌ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌’ ಎಂದು ಬದಲಿಸಿ, ಅದಕ್ಕೆ ಸಂಪುಟದ ಒಪ್ಪಿಗೆ ಪಡೆದರು.

ಉದ್ಧವ್‌ “ಹಿಂದುತ್ವ’ದ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬ ಕಳಂಕವನ್ನು ತೊಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವ ಪಡೆಯಿತು. ವಿಶ್ವಾಸಮತ ಸಾಬೀತಿಗೆ ಒಂದು ದಿನ ಬಾಕಿಯಿರುವಂತೆಯೇ ಅವರು “ಹಿಂದುತ್ವದ ಜಪ’ ಮಾಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂದು ವಿಶ್ಲೇಷಿಸಲಾಗಿದೆ.

ಕ್ಷಮೆ ಕೇಳಿದ್ದ ಸಿಎಂ
ಬುಧವಾರ ಸಂಜೆಯ ಸಂಪುಟ ಸಭೆಯಲ್ಲೇ “ವಿದಾಯ’ ಮಾದರಿ ಭಾಷಣ ಮಾಡಿದ್ದ ಸಿಎಂ ಉದ್ಧವ್‌ ಠಾಕ್ರೆ, “ನಾನು ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೆ ನನ್ನನ್ನು ಕ್ಷಮಿಸಿಬಿಡಿ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು. ಈ ಸಹಕಾರ ಹೀಗೆಯೇ ಮುಂದುವರಿಯಲಿ’ ಎಂದು ಸಚಿವರನ್ನು ಉದ್ದೇಶಿಸಿ ಹೇಳಿದ್ದರು.

ಸಿಎಂ ಪದತ್ಯಾಗದ ಬಳಿಕ
-ಗುವಾಹಾಟಿಯಿಂದ ಗೋವಾ ತಲುಪಿ ಅಲ್ಲಿಂದ ಮುಂಬಯಿಗೆ ಹೊರಟ ಶಿಂಧೆ ನೇತೃತ್ವದ ಬಂಡಾಯ ಶಾಸಕರು.
-ಮಹಾರಾಷ್ಟ್ರ ಉಸ್ತುವಾರಿ ಸಿ.ಟಿ. ರವಿ ಅವರನ್ನು ಮುಂಬಯಿಗೆ ಕಳುಹಿಸಿದ ಬಿಜೆಪಿ ವರಿಷ್ಠರು.
-ಮುಂಬಯಿಯ ಹೊಟೇಲ್‌ನಲ್ಲಿ ಎನ್‌ಸಿಪಿ ನಾಯಕರಿಂದಲೂ ಸಭೆ.

ನಾಳೆಯೇ ಹೊಸ ಸರಕಾರ?
ಉದ್ಧವ್‌ ರಾಜೀನಾಮೆಯ ಬೆನ್ನಲ್ಲೇ ಬಿಜೆಪಿ ನಾಯಕ ದೇವೇಂದ್ರ ಫ‌ಡ್ನವೀಸ್‌ ಅವರು ಮುಂಬಯಿಯ ಹೊಟೇಲ್‌ನಲ್ಲಿ ಬಿಜೆಪಿ ಶಾಸ ಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಶುಕ್ರವಾರ, ಜು. 1ರಂದೇ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಫ‌ಡ್ನವೀಸ್‌ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಅಧಿಕವಾಗಿದೆ.

“ನನ್ನ ಜನರೇ ನನ್ನ ಬೆನ್ನಿಗೆಚೂರಿಯಿಂದ ಇರಿದರು. ನನ್ನವರಿಂದಲೇ ನಾನು ಮೋಸ ಹೋದೆ.
-ಉದ್ಧವ್‌ ಠಾಕ್ರೆ

Advertisement

Udayavani is now on Telegram. Click here to join our channel and stay updated with the latest news.

Next