ಜೈಪುರ: ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಖಾತೆ ಸಚಿವ ನಾರಾಯಣ ರಾಣೆ ಹೇಳಿದರು.
ರಾಜಸ್ಥಾನ ಪ್ರವಾಸದಲ್ಲಿರುವ ಕೇಂದ್ರ ಸಚಿವರು ಜೈಪುರದಲ್ಲಿ ಮಾತನಾಡಿ, “ಮಹಾರಾಷ್ಟ್ರದಲ್ಲಿ ಅತೀ ಶೀಘ್ರದಲ್ಲಿ ಬದಲಾವಣೆಯನ್ನು ಕಾಣುತ್ತೀರಿ. ಮಾರ್ಚ್ ನಲ್ಲಿ ಬದಲಾವಣೆಯಾಗಲಿದೆ. ಸರ್ಕಾರ ರಚಿಸಲು ಅಥವಾ ಮುರಿಯಲು ಕೆಲವು ವಿಚಾರಗಳನ್ನು ರಹಸ್ಯವಾಗಿಡಬೇಕಾಗುತ್ತದೆ” ಎಂದು ಹೇಳಿದರು.
“ಉದ್ಧವ್ ಠಾಕ್ರೆ ಅವರು ಅಸ್ವಸ್ಥರಾಗಿದ್ದಾರೆ, ಹಾಗಾಗಿ ಅವರ ಬಗ್ಗೆ ಈಗ ಮಾತನಾಡಬೇಡಿ ಎಂದು ನಮ್ಮ ಪಕ್ಷದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ” ಎಂದು ಸಚಿವ ರಾಣೆ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ಭಾರತೀಯರಿವರು..: ಇಲ್ಲಿದೆ ಪಟ್ಟಿ
ಹೀಗಾಗಿ ರಾಜ್ಯದಲ್ಲಿ ಸರ್ಕಾರವನ್ನು ಒಡೆದು ಬಿಜೆಪಿ ನಾಯಕತ್ವವನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಮತ್ತು ಶಿವಸೇನೆಯ ಮಾಜಿ ಸದಸ್ಯ ನಾರಾಯಣ ರಾಣೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಸರ್ಕಾರವಿದೆ. ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಅವರು ಎರಡು ವಾರಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.