ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಂಗಳವಾರ (ಜೂನ್ 08) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ತಿಳಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಒಂದೇ ಪಂದ್ಯಕ್ಕೆ ಕ್ರಿಕೆಟ್ ಜೀವನ ಅಂತ್ಯ:ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ರಾಬಿನ್ಸನ್ ಅಮಾನತು
ಮರಾಠ ಮತ್ತು ಒಬಿಸಿ ಮೀಸಲಾತಿ ಮತ್ತು ತೌಕ್ತೇ ಚಂಡಮಾರುತದ ಪರಿಹಾರದ ಕುರಿತು ಚರ್ಚೆ ನಡೆಸಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನೊಳಗೊಂಡ ಠಾಕ್ರೆ ನಿಯೋಗವು ಪ್ರಧಾನಿ ಅವರನ್ನು ಭೇಟಿಯಾಗಲಿದೆ ಎಂದು ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿನ ಮರಾಠ ಸಮುದಾಯವನ್ನು ಎಸ್ ಇಬಿಸಿ (ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿ) ಎಂದು ಘೋಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮರಾಠ ಮೀಸಲಾತಿ ಅಸಂವಿಧಾನಿಕ ಎಂದು ಕಳೆದ ವಾರ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಠಾಕ್ರೆ ಅವರ ಮನವಿಯನ್ನು ಕೇಂದ್ರ ಸರ್ಕಾರ ಬದಿಗಿರಿಸಿರುವುದಾಗಿ ವರದಿ ಹೇಳಿದೆ. 2018ರಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಿತ್ತು.
ಪ್ರತಿಭಟನೆಯನ್ನು ತಣಿಸುವ ನಿಟ್ಟಿನಲ್ಲಿ ಫಡ್ನವೀಸ್ ಅವರು ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾತಿ ಕ್ರಮಕ್ಕೆ ಕೇಂದ್ರ ಸರ್ಕಾರ ಕೂಡಾ ಬೆಂಬಲ ನೀಡಿತ್ತು. ಬಾಂಬೆ ಹೈಕೋರ್ಟ್ ಕೂಡಾ ಮೀಸಲತಿಯನ್ನು ಎತ್ತಿಹಿಡಿದಿತ್ತು. ಆದರೆ ಸುಪ್ರೀಂಕೋರ್ಟ್ ಈ ಆದೇಶವನ್ನು ತಡೆದಿತ್ತು.