ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಮಾಲೆಗಾಂವ್ ನ ಮಾಜಿ ಮೇಯರ್ ಮತ್ತು ಎಐಎಂಐಎಂ ಪದಾಧಿಕಾರಿ ಅಬ್ದುಲ್ ಮಲಿಕ್ ಯೂನಸ್ ಶೇಖ್ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ (39) ಅವರನ್ನು ನಾಸಿಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ, ದಾಳಿಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಲೆಗಾಂವ್ ನ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಶಾಸಕ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ ಖಾಲಿಕ್ ಆಸ್ಪತ್ರೆಯಲ್ಲಿ ಶೇಖ್ ಅವರನ್ನು ಭೇಟಿ ಮಾಡಿದ ನಂತರ ಪ್ರತಿಕ್ರಿಯಿಸಿದ್ದು, ಕಳೆದ ಕೆಲವು ದಿನಗಳಲ್ಲಿ ಮಾಲೆಗಾಂವ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕುರಿತು ವಿಧಾನಸಭೆ ಹಾಗೂ ಗೃಹ ಇಲಾಖೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಹಳೆಯ ಆಗ್ರಾ ರಸ್ತೆಯಲ್ಲಿರುವ ಕಟ್ಟಡ ಸಾಮಗ್ರಿಗಳ ಅಂಗಡಿಯೊಂದರ ಹೊರಗೆ ಶೇಖ್ ನಿಂತಿದ್ದಾಗ ಮಧ್ಯರಾತ್ರಿ 1.15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮಾಲೆಗಾಂವ್ ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟಾರು ಬೈಕ್‌ನಲ್ಲಿ ಆಗಮಿಸಿ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಶೇಖ್ ಅವರ ಎದೆ ಮತ್ತು ಕಾಲಿಗೆ ಗಾಯಗಳಾಗಿವೆ.
ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಮಾಲೆಗಾಂವ್‌ನಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.