Advertisement

ಗಡಚಿರೋಲಿ: 14 ನಕ್ಸಲರ ಹತ್ಯೆ

06:00 AM Apr 23, 2018 | Team Udayavani |

ಮುಂಬೈ/ನವದೆಹಲಿ: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರ ವಿರುದ್ಧ ವಿಶೇಷ ಕಾರ್ಯಪಡೆ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ಸದೆಬಡಿದಿದೆ. ಈ ಪೈಕಿ 12 ಮಂದಿ ಕೆಂಪು ಉಗ್ರರ ಮೃತದೇಹ ಸಿಕ್ಕಿದ್ದು, ಅಸುನೀಗಿದವರ ಪೈಕಿ ಇಬ್ಬರು ನಕ್ಸಲ್‌ ಕಮಾಂಡರ್‌ಗಳು ಕೂಡ ಸೇರಿದ್ದಾರೆ.

Advertisement

ಗಡಚಿರೋಲಿ ಜಿಲ್ಲೆಯ ಭಮ್ರಾಗಡದ ತಡ್ಗಾಂವ್‌ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗ್ಗಿನಿಂದಲೇ ಖಚಿತ ಸುಳಿವಿನ ಮೇರೆಗೆ ನಕ್ಸಲೀಯರ ವಿರುದ್ಧ ವಿಶೇಷ ಪೊಲೀಸ್‌ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ ಕಸನಾಸುರ್‌ ಅರಣ್ಯ ಪ್ರದೇಶದ ಸಮೀಪಕ್ಕೆ ವಿಶೇಷ ಪಡೆ ಸಮೀಪಿಸುತ್ತಿರುವಂತೆಯೇ ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. ಈ ಸಂದರ್ಭದಲ್ಲಿ 14 ಮಂದಿ ಕೆಂಪು ಉಗ್ರರು ಅಸುನೀಗಿದ್ದಾರೆ ಎಂದು ಮಹಾರಾಷ್ಟ್ರ ಐಜಿಪಿ ಶರದ್‌ ಶೇಲಾರ್‌ ಹೇಳಿದ್ದಾರೆ. ಅಸುನೀಗಿದ ನಕ್ಸಲರ ಪೈಕಿ 12 ಮಂದಿಯ ಮೃತದೇಹ ಸಿಕ್ಕಿದೆ. ಉಳಿದ ಎರಡು ದೇಹಗಳಿಗಾಗಿ ಶೋಧ ನಡೆದಿದೆ ಎಂದು ಐಜಿಪಿ ತಿಳಿಸಿದ್ದಾರೆ.

ಎನ್‌ಐಎ ತನಿಖೆ: ಇದೇ ವೇಳೆ ನಕ್ಸಲ್‌ ನಾಯಕರು ಮತ್ತು ಅವರ ಬಗ್ಗೆ ಮೃದು ಧೋರಣೆ ಹೊಂದಿರುವವರು ಅಕ್ರಮವಾಗಿ ಹಣ ವ್ಯವಹಾರ ನಡೆಸಿದ್ದಾರೆಯೇ ಹಾಗೂ ಅದನ್ನು ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬಳಕೆ ಮಾಡಿದ್ದಾರೆಯೇ ಎಂಬ ಬಗ್ಗೆ ಎನ್‌ಐಎಯ ವಿಶೇಷ ಘಟಕ ತನಿಖೆ ನಡೆಸಲಿದೆ ಎಂದು ಗೃಹ ಇಲಾಖೆ ಅಧಿಕಾರಿ ಹೇಳಿದ್ದಾರೆ. 

ಕಾರ್ಯಾಚರಣೆಗಳ ಮೂಲಕ ನಾವು ನಕ್ಸಲರ ಆತ್ಮವಿಶ್ವಾಸವನ್ನು ನುಚ್ಚುನೂರು ಮಾಡಿದ್ದೇವೆ. ಸದ್ಯದಲ್ಲೇ ದೇಶದಿಂದ ನಕ್ಸಲ್‌ ಸಿದ್ಧಾಂತವನ್ನು ನಿರ್ಮೂಲನೆ ಮಾಡಲಿದ್ದೇವೆ.
ರಾಜನಾಥ್‌ಸಿಂಗ್‌, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next