ಮುಂಬಯಿ : ಮಹಾರಾಷ್ಟ್ರದ ಸೆಕ್ರೆಟರಿಯೇಟ್ ಅಥವಾ ಮಂತ್ರಾಲಯದಲ್ಲಿ ನಾಲ್ಕನೇ ತರಗತಿಯ ಶೈಕ್ಷಣಿಕ ಅರ್ಹತೆ ಹೊಂದಿರುವವರಿಂದ ಕರೆಯಲಾಗಿದ್ದ ಹದಿಮೂರು ಕ್ಯಾಂಟೀನ್ ವೇಟರ್ ಹುದ್ದೆಗಳಿಗೆ 7,000 ಮಂದಿ ಅರ್ಜಿ ಹಾಕಿದ್ದು ಇವರಲ್ಲಿ ಹೆಚ್ಚಿನವರು ಪದವೀಧರರಾಗಿದ್ದಾರೆ ಎಂದು ಇಂದು ಶುಕ್ರವಾರ ಸಚಿವಾಲಯದಲ್ಲಿನ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕ್ಯಾಂಟೀನ್ ವೇಟರ್ ಹುದ್ದೆಗೆ 100 ಅಂಕಗಳ ಲಿಖೀತ ಪರೀಕ್ಷೆಯನ್ನು ನಡೆಸಲಾಗಿತ್ತು. ಇದಕ್ಕೆ ಕೇವಲ ನಾಲ್ಕನೇ ತರಗತಿ ವಿದ್ಯಾರ್ಹತೆ ಸಾಕಿತ್ತು.
ಈ ಹದ್ದೆಗಳ ಭರ್ತಿ ಪ್ರಕ್ರಿಯೆ ಕಳೆದ ವರ್ಷ ಡಿ.31ಕ್ಕೆ ಮುಗಿದಿತ್ತು. ಈಗ ಆಯ್ದ ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ಪ್ರಕ್ರಿಯೆ ಜಾರಿಯಲ್ಲಿದೆ. 13 ಕ್ಯಾಂಟೀನ್ ವೇಟರ್ ಹುದ್ದೆಗೆ ಆಯ್ಕೆಯಾಗಿರುವ ಅರ್ಜಿದಾರರ ಪೈಕಿ ಎಂಟು ಮಂದಿ ಪುರುಷರು ಮತ್ತು ಉಳಿದ ಐವರು ಮಹಿಳೆಯರು. ಉದ್ಯೋಗಕ್ಕೆ ಆಯ್ಕೆಯಾಗಿರುವ ಇವರ ಪೈಕಿ ಇನ್ನು ಇಬ್ಬರು ಅಥವಾ ಮೂವರು ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಿ ಉದ್ಯೋಗಕ್ಕೆ ಅಧಿಕೃತವಾಗಿ ಸೇರಬೇಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಉದ್ಯೋಗಕ್ಕೆ ಆಯ್ಕೆಯಾಗಿರುವ 13 ಮಂದಿಯಲ್ಲಿ 12 ಮಂದಿ ಪದವೀಧರರು; ಒಬ್ಬ ಅಭ್ಯರ್ಥಿ 12ನೇ ತರಗತಿ ಓದಿದವರು. ಉದ್ಯೋಗಕ್ಕೆ ಅರ್ಜಿ ಹಾಕಿದವರಲ್ಲಿ ಹೆಚ್ಚಿನವರು ಪದವೀಧರರಾಗಿದ್ದು ಕೆಲವೇ ಕೆಲವರು ಮಾತ್ರವೇ 12ನೇ ತರಗತಿ ಓದಿದವರಾಗಿದ್ದರು.
ಮಂತ್ರಾಲಯದ ಕ್ಯಾಂಟೀನ್ ವೇಟರ್ ಕೆಲಸಕ್ಕೆ ಪದವೀಧರರನ್ನು ನೇಮಿಸಿಕೊಂಡಿರುವ ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಧನಂಜಯ ಮುಂಢೆ ಅವರು “ಪದವಿ ಶಿಕ್ಷಣ ಪಡೆದವರಿಂದ ಕ್ಯಾಂಟೀನ್ ಸೇವೆ ಪಡೆಯವುದಕ್ಕೆ ಸಚಿವರು ಮತ್ತು ಕಾರ್ಯದರ್ಶಿಗಳಿಗೆ ನಾಚಿಕೆಯಾಗಬೇಕು” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಎರಡು ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ದೊರಕಿಸಿಕೊಟ್ಟಿದ್ದಾರೆನ್ನುವುದನ್ನು ತೀವ್ರವಾಗಿ ಪ್ರಶ್ನಿಸಿದ ಮುಂಢೆ, ”ಈಚೆಗೆ ಮಹಾರಾಷ್ಟ್ರದ ಪೊಲೀಸ್ ದಳದಲ್ಲಿ 852 ಖಾಲಿ ಹುದ್ದೆಗೆ 10.5 ಲಕ್ಷ ಮಂದಿ ಅರ್ಜಿ ಹಾಕಿದ್ದರು; ಇದೇ ರೀತಿ ರೈಲ್ವೇಯಲ್ಲಿನ 10,000 ಹುದ್ದೆಗಳಿಗೆ ಒಂದು ಕೋಟಿ ಯುವ ಜನರು ಅರ್ಜಿ ಹಾಕಿದ್ದರು” ಎಂದು ಹೇಳಿದರು.