Advertisement

Venoor ಬಾಹುಬಲಿಗೆ ಮಹಾಮಜ್ಜನ: ಇಂದಿನಿಂದ ಶತಮಾನದ 3ನೇ ಮಹಾಮಸ್ತಕಾಭಿಷೇಕ

12:32 AM Feb 22, 2024 | Team Udayavani |

ಬೆಳ್ತಂಗಡಿ: ತ್ಯಾಗ ಸಂದೇಶ ದಿಂದ ಜಗದ್ವಿಖ್ಯಾತಿ ಹೊಂದಿ ಪಥದರ್ಶಕನಾದ ಭಗವಾನ್‌ ಬಾಹುಬಲಿ ಸ್ವಾಮಿಗೆ ವೇಣೂರಿನಲ್ಲಿ ಗುರುವಾರ ಈ ಶತಮಾನದ ಮೂರನೇ ಮಹಾಮಜ್ಜನ ಆರಂಭವಾಗಲಿದೆ. 12 ವರ್ಷಗಳ ಬಳಿಕ ನಡೆಯಲಿರುವ ಈ ಮಹೋತ್ಸವಕ್ಕೆ ಜಿನಭಕ್ತರು, ಜನರು ಕಾತರರಾಗಿದ್ದಾರೆ. ಪಶ್ಚಿಮ ಘಟ್ಟದ ಪದತಲದಲ್ಲಿರುವ ವೇಣೂರು ಎಂಬ ಪುಟ್ಟ ಪಟ್ಟಣ ತ್ಯಾಗಮೂರುತಿಯ ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧವಾಗಿದೆ.

Advertisement

ಕ್ರಿ.ಶ. 1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹು ಬಲಿ ಮೂರ್ತಿಯನ್ನು ಅಜಿಲ ಅರಸರಾದ ತಿಮ್ಮಣ್ಣಾಜಿಲರು ಪ್ರತಿಷ್ಠಾಪಿಸಿ ಪ್ರಥಮ ಮಹಾ ಮಸ್ತಕಾಭಿಷೇಕ ನೆರವೇರಿಸಿದ್ದರು. ಆ ಬಳಿಕ ದಾಖಲೆಗಳಂತೆ 1928, 1956 ರಲ್ಲಿ ಮಹಾ ಮಜ್ಜನ ನೆರವೇರಿತ್ತು. 21ನೇ ಶತಮಾನದಲ್ಲಿ 2000, 2012ರಲ್ಲಿ ಜರಗಿ ಈಗ ಈ ಶತಮಾನದ 3ನೇ ಮಹಾಮಸ್ತಕಾಭಿಷೇಕ ನಡೆಯಲಿದೆ. 12 ವರುಷಗಳ ತರುವಾಯ ನಡೆಯುವ ಈ ಮಹಾಮಜ್ಜನಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ ಸೇವೆಯನ್ನು ಸಮರ್ಪಿಸಲಿದ್ದಾರೆ.

ವೇಣೂರು ಗ್ರಾಮದ ಫಲ್ಗುಣೀ ನದಿ ತೀರದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ 35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿಯ ಮಜ್ಜನಕ್ಕೆ ವೇಣೂರು ಸಿದ್ಧಗೊಂಡಿದೆ. ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಿದ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣರಸ ಡಾ| ಪದ್ಮಪ್ರಸಾದ್‌ ಅಜಿಲರು ಈ ಕ್ಷೇತ್ರದ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತ ಬಂದಿದ್ದು, ಅವರಿಗೆ ಪಟ್ಟಾಭಿಷೇಕವಾದ ಬಳಿಕ ಇದು ತೃತೀಯ ಮಸ್ತಕಾಭಿಷೇಕ.

ವಿಶೇಷಗಳು
-ವೇಣೂರು ಶ್ರೀ ದಿಗಂಬರ ಜೈನ ಕ್ಷೇತ್ರದ ಮೇಲುಸ್ತುವಾರಿ
-420 ವರ್ಷಗಳ ಇತಿಹಾಸದಲ್ಲಿ 6ನೇ ಮಹಾಮಜ್ಜನ
-35 ಅಡಿ ಎತ್ತರದ ವಿಗ್ರಹಕ್ಕೆ 9 ದ್ರವ್ಯಗಳ ಮೂಲಕ ನಡೆಯುವ ವರ್ಣಮಯ ಮಹಾಮಜ್ಜನ
-9 ದಿನಗಳಲ್ಲಿ ವಿವಿಧ ಸೇವಾಕರ್ತರಿಂದ ಮಹಾಮಜ್ಜನ

ವೇಣೂರು ಮಹಾಮಸ್ತಕಾಭಿಷೇಕ
ಮುನಿಮಹಾರಾಜದ್ವಯರ ಪುರಪ್ರವೇಶ
ಬೆಳ್ತಂಗಡಿ: ವೇಣೂರಿನಲ್ಲಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಫೆ. 21ರಂದು ಮುನಿವರ್ಯರ ಪಾದಸ್ಪರ್ಶವಾಗಿದೆ. ಮಹಾಮಸ್ತಕಾಭಿಷೇಕದ ವೇಳೆ ದಿವ್ಯ ಸಾನ್ನಿಧ್ಯ ವಹಿಸಲಿರುವ ಪೂಜ್ಯ 108 ಅಮೋಘಕೀರ್ತಿ ಮಹಾರಾಜರು ಮತ್ತು ಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರನ್ನು ಬುಧವಾರ ಭವ್ಯ ಮೆರವಣಿಗೆಯಲ್ಲಿ ವೇಣೂರಿಗೆ ಬರಮಾಡಿಕೊಳ್ಳಲಾಯಿತು.

Advertisement

ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಅಳದಂಗಡಿ ಅರಮನೆಯ ಅರಸರು ಡಾ| ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಮತ್ತಿತರರು ಮೆರವಣಿಗೆಯಲ್ಲಿ ಇದ್ದರು.

ಇಂದು ಅಪರಾಹ್ನ 3ಕ್ಕೆ ಉದ್ಘಾಟನೆ
ಫೆ. 22ರಿಂದ ಮಾ 1ರ ತನಕ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಗುರುವಾರ ಬೆಳಗ್ಗೆ ತೋರಣ ಮುಹೂರ್ತ ನಡೆದು ಬಳಿಕ ಅಪರಾಹ್ನ 3ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಪೂಜ್ಯ 108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು, ಮೂಡುಬಿದಿರೆ ಜೈನಮಠದ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರವಣಬೆಳಗೊಳ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಸಚಿವ ದಿನೇಶ್‌ ಗುಂಡೂರಾವ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಂಸದ ನಳಿನ್‌ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್‌, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌, ಶಾಸಕ ಹರೀಶ್‌ ಪೂಂಜ, ವಿ.ಪ. ಸದಸ್ಯ ಕೆ. ಹರೀಶ್‌ ಕುಮಾರ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್‌ ಉಪಸ್ಥಿತರಿರುವರು.

ಫೆ. 22ರ ಮೊದಲ ಅಭಿಷೇಕ
ಭಗವಾನ್‌ ಬಾಹುಬಲಿ ಸ್ವಾಮಿಗೆ ಮೊದಲ ದಿನ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಹಾಗೂ ಕುಟುಂಬಸ್ಥರ ನೇತೃತ್ವದಲ್ಲಿ ಸಂಜೆ 6.55ರಿಂದ 108 ಕಲಶಗಳಿಂದ ಮಸ್ತಕಾಭಿಷೇಕದ ಮಹಾಪೂಜೆ ನೆರವೇರಲಿದೆ.

ದ್ರವ್ಯ ಸಿಂಚನದಿ ವರ್ಣಪಡೆಯುವ ಬಾಹುಬಲಿ
ಮಹಾಮಜ್ಜನಕ್ಕೆ ಇಂದು ಬಾಹುಬಲಿ ಸಜ್ಜಾಗಿದ್ದರೆ, ಇತ್ತ ಮುನಿವರ್ಯರು, ಗಣ್ಯರು, ಜಿನ ಭಕ್ತರು ವೇಣೂರು ತೀರ್ಥ ಕ್ಷೇತ್ರದಲ್ಲಿ ದ್ರವ್ಯ ಲೇಪಿತ ಸ್ವಾಮಿಯ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇತ್ತ ವೇಣೂರು ಊರಿಗೆ ಊರೇ ಸಿಂಗಾರಗೊಂಡು ಸಂಭ್ರಮದಲ್ಲಿ ಮನೆಮಾಡಿದೆ. ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ 4ನೇ ವೀರ ತಿಮ್ಮಣ್ಣಾಜಿಲ ಅರಸರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಈ ವಿರಾಗ್‌ ವಿರಾಗಿ ಮೂರ್ತಿಯ ಒಟ್ಟು 6ನೇ ಬಾರಿಯ ಮಹಾಮಜ್ಜನದಲ್ಲಿ ಈಗಿನ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ಸಮ್ಮುಖದಲ್ಲಿ ನೆರವೇರುತ್ತಿರುವುದು ಅಜಿಲ ಸೀಮೆಗೆ ಒಂದು ದೈವತ್ವ ಕಳೆ ಬಂದಿದೆ.

ಭಕ್ತರಿಗೆ, ಗಣ್ಯರಿಗಾಗಿ ವೇಣೂರಿನ ಅಷ್ಟ ದಿಕ್ಕುಗಳಲ್ಲೂ ಸಿದ್ದತೆ ಕೈಗೊಂಡಿದ್ದು, ಊಟ, ವಸತಿ ಸಹಿತ ಮನೋರಂಜನೆಗೆ ಪೂರಕ ಸಂಭ್ರಮವು ಸಿಗಲಿದೆ. ಈಗಾಗಲೆ ಕ್ಷೇತ್ರ, ಮುಖ್ಯ ರಸ್ತೆಗಳು ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮತ್ತು ಜೈನ ಮುನಿಗಳ ಮಾರ್ಗದರ್ಶನದಲ್ಲಿ ಮಹಾ ಮಸ್ತಕಾಭಿಷೇಕ ಕಾರ್ಯ ನೆರವೇರಲಿದ್ದು, ಸತತ 9 ದಿನಗಳ ಕಾಲ ಭಗವಾನ್‌ ಬಾಹುಬಲಿಗೆ ಮಹಾಮಜ್ಜನದ ವೈಭವದ ಕಾರ್ಯಕ್ರಮಗಳೊಂದಿಗೆ ಪೂರ್ಣ ಕುಂಭ, ಚತುಷೊRàಣ ಕುಂಭ, ಎಳನೀರು, ಹಾಲು, ಕಬ್ಬಿನ ಹಾಲು, ಶ್ರೀಗಂಧ, ಚಂದನ, ಅಷ್ಟಗಂಧ ಮೊದಲಾದವುಗಳಿಂದ 9 ದಿನಗಳ ಕಾಲ ಮಸ್ತಕಾಭಿಷೇಕ ನೆರವೇರಲಿದೆ.

ಮಹಾಮಸ್ತಕಾಭಿಷೇಕ್ಕೆ ಬರುವ ಭಕ್ತರಿಗೆ ಪೂರಕ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಕಲ್ಪಿಸಿದ್ದು, ನೀಲಿನಕಾಶೆ ಮೂಲಕ ಸಿದ್ಧತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ನೇರ ವೀಕ್ಷಣೆಗೆ ಎಲ್‌.ಸಿ.ಡಿ. ಪರದೆ, ಬಾಹುಬಲಿ ಮೂರ್ತಿಯ ಎರಡು ಬದಿ ಅಟ್ಟಳಿಗೆ ವ್ಯವಸ್ಥೆ, 1000 ಆಸನದ ವ್ಯವಸ್ಥೆ ಇರಲಿದೆ. ಊಟೋಪಚಾರಕ್ಕಾಗಿ ಏಕಕಾಲದಲ್ಲಿ 1,000 ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next