Advertisement
ಭಾರತ ಹುಣ್ಣಿಮೆಯಿಂದ ಹೋಳಿಹುಣ್ಣಿಮೆ ವರೆಗೂ ಕಂಬಿ ಮಲ್ಲಯ್ಯ ಪಟ್ಟಣದ ಪ್ರತಿ ಮನೆಗೆ ತೆರಳಿ ಭಕ್ತರಿಂದ ಪೂಜೆಗೊಳ್ಳುತ್ತಾನೆ. ಹೋಳಿ ಹುಣ್ಣಿಮೆಯ ಮರುದಿನ (ಮಾ.18ರಂದು) ಕಂಬಿ ಮಲ್ಲಯ್ಯನ ಶ್ರೀಶೈಲ ಪಾದಯಾತ್ರೆ ಪ್ರಾರಂಭವಾಗುತ್ತದೆ. ಅಂದಿನಿಂದ 15ದಿನಗಳ ಪಾದಯಾತ್ರೆಯ ಮೂಲಕ ಯುಗಾದಿ ಅಮವಾಸ್ಯೆ ಮುನ್ನಾದಿನ ಸುಕ್ಷೇತ್ರ ಶ್ರೀಶೈಲವನ್ನು ತಲುಪಿ, ಶ್ರೀಕ್ಷೇತ್ರ ದರ್ಶನ ಮುಗಿಸಿ ಯುಗಾದಿ ಪಾಡ್ಯ ಮರುದಿನ ಅಲ್ಲಿಂದ ಪಾದಯಾತ್ರೆ ಮೂಲಕ ಮಹಾಲಿಂಗಪುರಕ್ಕೆ ಮರಳುತ್ತಾನೆ.
Related Articles
Advertisement
ಶುಭಕಾರ್ಯಗಳಿಗೆ ನಿಷೇಧ: ಮುಖ್ಯವಾಗಿ ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ತೆರಳಿದ ನಂತರ (18-3-2022ರಿಂದ) ಮರಳಿ ಊರಿಗೆ ಬಂದು ಐದೇಶಿ ಆಚರಿಸುವರೆಗೂ (21-4-2022) ವರೆಗೂ ಪಟ್ಟಣದಲ್ಲಿ ನಿಶ್ಚಿತಾರ್ಥ, ಮದುವೆ, ಸೀಮಂತ, ಗೃಹ ಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ, ಪಾದರಕ್ಷೆ ಖರೀದಿಸುವಂತಿಲ್ಲ, ಮನೆಯಲ್ಲಿ ಹೊಸ ಒಲೆ ಅಳವಡಿಕೆ ಮತ್ತು ಪೊರಕೆ ಖರೀದಿಸುವಂತಿಲ್ಲ. ಮುಖ್ಯವಾಗಿ ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ಹೋಗುವ ದಿನ ಊರಲ್ಲಿ ಇದ್ದವರು, ಪರಸ್ಥಳಕ್ಕೆ ಹೋಗಿದ್ದರೆ ಐದೇಶಿ ಸಮಾರೋಪದ ದಿನ ಕಡ್ಡಾಯವಾಗಿ ಊರಿಗೆ ಮರಳಿ ಬಂದು ಮಲ್ಲಯ್ಯನಿಗೆ ಪೂಜೆ ಸಲ್ಲಿಸಬೇಕೆಂಬುದು ವಾಡಿಕೆ. ಇದನ್ನು ಕಡೆಗಣಿಸಿದವರಿಗೆ ಕೇಡು ಕಟ್ಟಿಟ್ಟ ಬುತ್ತಿ ಎಂಬುದು ಭಕ್ತರ ಅಚಲ ನಂಬಿಯಾಗಿದೆ.
ಇಂದು ಐದೇಶಿ ಉತ್ಸವ: ಕಂಬಿ ಮಲ್ಲಯ್ಯ ಪುರ ಪ್ರವೇಶದ ನಂತರ ಬರುವ ಗುರುವಾರ ಏ.21ರಂದು ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತರೆಲ್ಲರೂ ಸಾಗರೋಪಾದಿಯಲ್ಲಿ ಮಹಾಲಿಂಗೇಶ್ವರ ದೇವಾಲಯಕ್ಕೆ ಬಂದು ಬೆಲ್ಲ ಹಂಚಿ, ಕಾಯಿ ಕರ್ಪೂರವನ್ನು ಅರ್ಪಿಸಿ ಕೃತಾರ್ಥರಾಗುತ್ತಾರೆ. ಈ ವೈಶಿಷ್ಟ್ಯಪೂರ್ಣ ಐದೇಶಿಯು ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜರುಗುತ್ತದೆ. ಐದೇಶಿ ನಿಮಿತ್ತ ರಾತ್ರಿ ಬೈಲಾಟ ಹಾಗೂ ಕರಡಿ ಮಜಲು ಕಾರ್ಯಕ್ರಮ ನಡೆಯಲಿವೆ.
ಮನೆ-ಮನೆಗೆ ಕಂಬಿ ಮಲ್ಲಯ್ಯನ ಪೂಜೆ, ಶ್ರೀಶೈಲ ಪಾದಯಾತ್ರೆಗೆ ಬೀಳ್ಕೊಡುಗೆ, ಮರಳಿ ಬಂದಾಗ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅದ್ಧೂರಿ ಸ್ವಾಗತ, ಐದೇಶಿ ಸಮಾರೋಪ ಸೇರಿದಂತೆ ಪ್ರತಿಯೊಂದು ಆಚರಣೆಗಳಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ-ಭಾವವಿಲ್ಲದೇ ಪಟ್ಟಣದ ಎಲ್ಲ ಸಮಾಜದವರು ಶ್ರದ್ಧಾ-ಭಕ್ತಿಯಿಂದ ಉತ್ಸವದಲ್ಲಿ ಭಾಗವಹಿಸುವುದು ಮಹಾಲಿಂಗಪುರದ ಧಾರ್ಮಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ, ಭಾವೈಕ್ಯತೆಯ ಸಹಬಾಳ್ವೆಗೆ ಮಾದರಿಯಾಗಿದೆ.
ಚಂದ್ರಶೇಖರ ಮೋರೆ