ಬೆಂಗಳೂರು: ಮಹದಾಯಿ ವಿಚಾರದಲ್ಲಿ ಕರ್ನಾಟಕ ಸೇರಿದಂತೆ ನೆರೆಯ ಗೋವಾ, ಮಹಾರಾಷ್ಟ್ರ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಆರೋಪಿಸಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ನಗರದಲ್ಲಿ ಗುರುವಾರ ಕರಾಳ ದಿನ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ ಕಾರ್ಯಕರ್ತರು, ಉತ್ತರ ಕರ್ನಾಟಕದ ಜನತೆ 900 ದಿನಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಸ್ಪಂದಿಸದಿರುವು ಖಂಡನೀಯ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಮಹದಾಯಿ ವಿಚಾರವು ಅಂತಾರಾಜ್ಯ ವಿವಾದವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಬೇಕು. ಆದರೆ ಈವರೆಗೆ ಆ ಪ್ರಯತ್ನ ನಡೆದಿಲ್ಲ ಎಂದು ದೂರಿದರು.
ಮೊಂಡುತನ: ಗೋವಾ ಸರ್ಕಾರವು ಅನಗತ್ಯವಾಗಿ ಮೊಂಡುತನ ಮುಂದುವರಿಸುತ್ತಿದೆ. ಎರಡು ರಾಜ್ಯಗಳ ರಾಜಕೀಯ ಮುಖಂಡರು ಪತ್ರ ವ್ಯವಹಾರದ ನಾಟಕವಾಡುತ್ತಿದ್ದಾರೆ. ವಿವಾದ ಬಗೆಹರಿಸುವಲ್ಲಿ ರಾಜ್ಯದ ಸಂಸದರು ಅದರಲ್ಲೂ ಬಿಜೆಪಿ ಸಂಸದರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಬಿಜೆಪಿ ಸಂಸದರು ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆದರೆ ಈವರೆಗೆ ಸಂಸದರಿಂದ ಆ ಕೆಲಸ ನಡೆದಿಲ್ಲ ಎಂದರು.
ಜ.10 ಸಭೆ: ಕೇಂದ್ರ ಸಚಿವರಾಗಿರುವ ರಾಜ್ಯದ ಸಂಸದರು ಈ ವಿಚಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಂಸತ್‌ನಲ್ಲಿ ಯಾರೊಬ್ಬರೂ ಇದರ ಬಗ್ಗೆ ದನಿ ಎತ್ತುತ್ತಿಲ್ಲ. ಕೇಂದ್ರ ಸಚಿವರ ವರ್ತನೆಯನ್ನು ಗಮನಿಸಿದರೆ ಯಾರೊಬ್ಬರಿಗೂ ಇದು ಸಮಸ್ಯೆಯಂತೆ ಕಂಡಂತಿಲ್ಲ. ಹಾಗಾಗಿ ಜ.10ರಂದು ನಾನಾ ಸಂಘಟನೆಗಳ ಮುಖಂಡರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಹೋರಾಟ ನಿರಂತರ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗ ಕನ್ನಡ ಒಕ್ಕೂಟವು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಈ ಹೋರಾಟ ಕರಾಳ ದಿನ ಆಚರಣೆಯೊಂದಿಗೆ ಅಂತ್ಯವಾಗುವುದಿಲ್ಲ ಎಂದು ಹೇಳಿದರು. ಕನ್ನಡ ಸೇನೆಯ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ಕನ್ನಡಪರ ಹೋರಾಟಗಾರರಾದ ಗಿರೀಶ್‌ಗೌಡ ಇತರರು ಇದ್ದರು.