ಯಕ್ಷಿಣಿ ರಂಗದಲ್ಲಿ ಹೌದಿನಿಯ ಹೆಸರನ್ನು ಕೇಳದವರು ವಿರಳ. ಈತನನ್ನು ಹಗ್ಗಗಳಿಂದ ಕಟ್ಟಿ, ಕೈಗೆ ಕೋಳವನ್ನು ತೊಡಿಸಿ, ಕಬ್ಬಿಣದ ಪೆಟ್ಟಿಗೆಯಲ್ಲಿ ಕೂರಿಸಿ, ಭದ್ರವಾಗಿ ಬೀಗ ಜಡಿದು ಅದನ್ನು ಸಮುದ್ರಕ್ಕೆ ಎಸೆದರೂ ಕ್ಷಣಾರ್ಧದಲ್ಲಿ ಬಂಧನದಿಂದ ಪಾರಾಗಿ ಬರುತ್ತಿದ್ದನಂತೆ! ಇಲ್ಲಿ ಅದೇ ರೀತಿಯ ಸರಳ ಎಸ್ಕೇಪ್ ತಂತ್ರವೊಂದನ್ನು ನಿಮಗೆ ಹೇಳಿಕೊಡುತ್ತೇನೆ.
ಇದನ್ನು ಸರಿಯಾಗಿ ಮಾಡಿದ್ದೇ ಆದರೆ, ಚಪ್ಪಾಳೆಗಳು ನಿಮ್ಮನ್ನು ಹಿಂಬಾಲಿಸಿಬಿಡುತ್ತದೆ. ಇದೇನು ಬ್ರಹ್ಮವಿದ್ಯೆ ಏನಲ್ಲ. ಪ್ರಯತ್ನ ಪಡುವುದಾದರೆ ಬಹಳ ಸುಲಭ.
ಪ್ರೇಕ್ಷಕರಲ್ಲಿ ಒಬ್ಬರನ್ನು ಕರೆದು ನಿಮ್ಮ ಎರಡೂ ಕೈಗಳನ್ನು ಒಂದು ಹಗ್ಗದ ಸಹಾಯದಿಂದ ಕಟ್ಟಿಸಿಕೊಳ್ಳಿ. (ಹೀಗೆ ಕಟ್ಟುವಾಗ ನಿಮ್ಮ ಮುಷ್ಟಿಯು ಮುಚ್ಚಿರಲಿ. ಮೇಲಿಂದ ಮೊದಲ ಚಿತ್ರವನ್ನು ನೋಡಿ). ನಂತರ ಸುಮಾರು ಎಂಟು ಅಡಿ ಉದ್ದದ ಇನ್ನೊಂದು ಹಗ್ಗವನ್ನು ತೆಗೆದುಕೊಂಡು ಕಟ್ಟಿರುವ ಹಗ್ಗ ಹಾಗೂ ಎರಡೂ ಕೈಗಳ ಒಳಭಾಗದಿಂದ ಅದನ್ನು ಸೇರಿಸಲು ಹೇಳಿ. ನಂತರ ಅದೇ ಪ್ರೇಕ್ಷಕನಿಗೆ ಆ ಹಗ್ಗದ ಎರಡೂ ತುದಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರಲು ತಿಳಿಸಿ.
ಇನ್ನೊಬ್ಬ ಪ್ರೇಕ್ಷಕನನ್ನು ಕರೆದು, ಒಂದು ಕರವಸ್ತ್ರದ ಸಹಾಯದಿಂದ ನಿಮ್ಮ ಕಟ್ಟಿರುವ ಕೈಗಳು ಕಾಣದಂತೆ ಮುಚ್ಚಲು ಹೇಳಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಕೈಗಳು ಪ್ರೇಕ್ಷಕ ಹಿಡಿದುಕೊಂಡಿರುವ ಹಗ್ಗದಿಂದ ಹೊರಗೆ ಬಂದಿರುತ್ತವೆ. ಮಾತ್ರವಲ್ಲದೆ ಎರಡೂ ಕೈಗಳನ್ನು ಜೋಡಿಸಿ ಕಟ್ಟಿರುವ ಹಗ್ಗವು ಬಿಚ್ಚಿರದೆ ಹಾಗೆಯೇ ಇರುತ್ತದೆ!
ತಂತ್ರ:
ಕರವಸ್ತ್ರವನ್ನು ಕೈಮೇಲೆ ಮುಚ್ಚಿದ ಕೂಡಲೇ ನಿಮ್ಮ ಮುಷ್ಟಿಯನ್ನು ಬಿಚ್ಚಿ. ನಿಮ್ಮ ಬಲಗೈಯ ಬೆರಳಿನಿಂದ ಪ್ರೇಕ್ಷಕ ಹಿಡಿದುಕೊಂಡಿರುವ ಹಗ್ಗವನ್ನು ಮೇಲಕ್ಕೆ ಎಳೆದು ಅದನ್ನು ಬಲಗೈ ಮೇಲಿನಿಂದ ಜಾರಿಸಿ. ಆಗ ಹಗ್ಗ ಹೊರಗೆ ಬರುತ್ತದೆ (ಮೇಲಿಂದ 2, 3 ಮತ್ತು 4 ನೇ ಚಿತ್ರವನ್ನು ನೋಡಿ). ಅಲ್ಲದೆ ಬಲಗೈ ಬೆರಳುಗಳಿಗೆ ಹಗ್ಗ ಸಿಗಬೇಕಾದರೆ ಕೈಗಳನ್ನು ಸ್ವಲ್ಪ ಹಿಂದಕ್ಕೂ ಮುಂದಕ್ಕೂ ತಿಕ್ಕಬೇಕು. ಇದನ್ನು ಚೆನ್ನಾಗಿ ಅಭ್ಯಾಸ ಮಾಡಿರಬೇಕಾಗುತ್ತದೆ. ಇಲ್ಲವಾದರೆ, ಯಡವಟ್ಟು ಗ್ಯಾರಂಟಿ. ಈ ಎಲ್ಲವನ್ನೂ ಸರಿಯಾಗಿ ತಿಳಿದು, ಪ್ರದರ್ಶಿಸಿದರೆ ಪ್ರೇಕ್ಷಕರು ಮರಳಾಗದೇ ಇರಲು ಸಾಧ್ಯವೇ ಇಲ್ಲ.
– ಉದಯ್ ಜಾದೂಗಾರ್