Advertisement

ಮ್ಯಾಜಿಕ್‌ ಅಜ್ಜಿ!

12:30 AM Jan 24, 2019 | |

ಶ್ರೀಮಂತ ಬೀದಿಗೆ ನೂಕಿದ್ದ ಮುದುಕಿಯನ್ನು ಸುಗುಣ ತನ್ನ ಮನೆಗೆ ತರೆತಂದು ಉಪಚರಿಸಿದಳು. ಮುದುಕಿ ಹಸಿವು ಎಂದಾಗ, ಅವಳು ಮಗನಿಗೆಂದು ಉಳಿಸಿಟ್ಟಿದ್ದ ಗೆಣಸನ್ನು ಮುದುಕಿಗೆ ಕೊಟ್ಟಳು. ಅದನ್ನು ತಿಂದು ಮುದುಕಿ ಸಂತುಷ್ಟಳಾದಳು. ಸುಗುಣಳ ಒಳ್ಳೆತನವನ್ನು ಮೆಚ್ಚಿ ತನ್ನ ಕೊಳೆಯಾದ ಜೋಳಿಗೆಯಿಂದ ಒಂದು ಸಣ್ಣ ಮಾಂತ್ರಿಕ ಕೋಲನ್ನು ತೆಗೆದಳು!

Advertisement

ಒಂದೂರಲ್ಲಿ ಒಬ್ಬ ಜಿಪುಣ ಮುದುಕ ಇದ್ದ. ಆ ಊರಿಗೆ ಅವನೇ ದೊಡ್ಡ ಶ್ರೀಮಂತ. ಆದರೂ ಒಬ್ಬರಿಗೂ ಅವನು ಸಹಾಯ ಮಾಡಿದವನಲ್ಲ. ಯಾರಾದರೂ ಸಹಾಯ ಕೇಳಿದರೆ, ಅವರನ್ನು ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದ. ಜಿಪುಣ ಮುದುಕನ ಮನೆಯ ಪಕ್ಕ ಸುಗುಣ ಎಂಬ ಬಡವಿಧವೆ ಗುಡಿಸಲಿನಲಿಲ ವಾಸಿಸುತ್ತಿದ್ದಳು. ಅವಳಿಗೆ ಒಬ್ಬ ಮಗನಿದ್ದ. ಚರಕದಲ್ಲಿ ನೂಲು ತೆಗೆದು ಅವರು ಜೀವನ ಸಾಗಿಸುತ್ತಿದ್ದರು. ಅವರು ಎಂದೂ ಯಾರ ಸಹಾಯವನ್ನು ಕೇಳಿರಲಿಲ್ಲ. ಅವರ ಕಷ್ಟ ನೋಡಿ ಶ್ರೀಮಂತನ ಸೊಸೆ ಮರುಗುತ್ತಿದ್ದಳು. ಮಾವನಿಗೆ ಗೊತ್ತಾಗದಂತೆ ಆಕೆ ಅಕ್ಕಿ ಬೇಳೆಯನ್ನು ಸುಗುಣಳಿಗೆ ತಂದುಕೊಡುತ್ತಿದ್ದಳು. ಒಂದು ದಿನ ಸೊಸೆಯ ಈ ಕೆಲಸ ಶ್ರೀಮಂತ ಕಣ್ಣಿಗೆ ಬಿದ್ದಿತು. ಅವನು ಸೊಸೆಯನ್ನು ನೂಕಿ ಸುಗುಣಳ ಮನೆಗೆ ಬಂದು ರಾದ್ಧಾಂತ ಮಾಡಿ ಅಡುಗೆ ಮನೆಯಲ್ಲಿದ್ದ ಅಷ್ಟಿಷ್ಟು ಅಕ್ಕಿಯನ್ನು ಕಸಿದುಕೊಂಡುಹೋದ.

ಮರುದಿನ ಶ್ರೀಮಂತ ಯಾರನ್ನೋ ಶಪಿಸುತ್ತಿದ್ದಿದ್ದು ಸುಗುಣಳಿಗೆ ಕೇಳಿಸಿತು. ಯಾರೆಂದು ನೋಡಲು, ಶ್ರೀಮಂತ ಸಹಾಯ ಬೇಡಿ ಬಂದ ಬಡ ಮುದುಕಿಯನ್ನು ಬೀದಿಗೆ ತಳ್ಳುತ್ತಿದ್ದ. ಮುದುಕಿ ರಸ್ತೆಗೆ ಬಿದ್ದಳು. ಓಡಿ ಹೋದ ಸುಗುಣ ಅಜ್ಜಿಯನ್ನು ಎತ್ತಿ ತನ್ನ ಮನೆಗೆ ಕರೆತಂದು ಉಪಚರಿಸಿದಳು. ಮುದುಕಿ ಹಸಿವು ಎಂದಳು. ಸುಗುಣ ತಾನು ಹಸಿದು ಮಗನಿಗೆಂದು ಉಳಿಸಿಟ್ಟಿದ್ದ ಗೆಣಸನ್ನು ಮುದುಕಿಗೆ ಕೊಟ್ಟಳು. ಅದನ್ನು ತಿಂದು ಮುದುಕಿ ಸಂತುಷ್ಟಳಾದಳು. ಸುಗುಣಳ ಒಳ್ಳೆತನವನ್ನು ಮೆಚ್ಚಿ ತನ್ನ ಕೊಳೆಯಾದ ಜೋಳಿಗೆಯಿಂದ ಒಂದು ಸಣ್ಣ ಕೋಲನ್ನು ತೆಗೆದು ಸುಗುಣಳ ತಲೆಯ ಮೇಲಿಟ್ಟು “ಈ ದಿನ ಸಂಜೆ ಸೂರ್ಯ ಮುಳುಗುವವರೆಗೂ ನೀನು ಮಾಡುವ ಕೆಲಸ ಅಕ್ಷಯವಾಗಲಿ, ಬಿತ್ತಿದ್ದೇ ಬೆಳೆಯಲಿ’ ಎಂದು ಆಶಿರ್ವಾದ ಮಾಡಿ ಹೊರಟು ಹೋದಳು. 

ಸುಗುಣ ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿದ್ದರೂ, ರಾತ್ರಿಯ ಊಟಕ್ಕೆ ಕೆಲಸ ಮಾಡಲೇಬೇಕಿತ್ತು. ಅದಕ್ಕೇ ಚರಕದ ಮುಂದೆ ಕುಳಿತಳು. ಹಸಿವಿನಿಂದ ಒದ್ದಾಡುತ್ತಾ ಹೊಟ್ಟೆ ಹಿಡಿದುಕೊಂಡು ಮಲಗಿದ್ದ ಮಗನನ್ನು ನೋಡಿ ಅವಳ ಕಣ್ಣು ತುಂಬಿ ಬಂತು. ಬೇಗನೆ ನೂಲು ತೆಗೆದು ಸಂತೆಯಲ್ಲಿ ಮಾರಿ, ಅಕ್ಕಿ ತಂದು ಗಂಜಿ ಮಾಡಬೇಕೆಂದು ಯೋಚಿಸಿದಳು. ನೂಲು ತೆಗೆಯಲು ಶುರುಮಾಡಿ ಒಂದೆರಡು ನಿಮಿಷವಾಗಿತ್ತಷ್ಟೇ… ನೋಡುತ್ತಾಳೆ ಚಿನ್ನದ ನೂಲಿನ ಎಳೆಗಳು ಬರುತ್ತಿವೆ! ಸುಗುಣ ದಂಗಾಗಿ ಚರಕವನ್ನು ನಿಲ್ಲಿಸಿದಳು. ಆದರೆ ಅದು ನಿಲ್ಲದೆ ತಾನಾಗಿಯೇ ತಿರುಗುತ್ತಲೇ ಇತ್ತು. ಅದರಿಂದ ಚಿನ್ನದ ನೂಲು ಸತತವಾಗಿ ಬರುತ್ತಲೇ ಇತ್ತು. ಮಗನನ್ನು ಎಬ್ಬಿಸಿದಳು. ಅವನು ಆಶ್ಚರ್ಯಚಕಿತನಾದ. ಒಂದೈದು ಎಳೆ ಚಿನ್ನದ ನೂಲು ಕೊಟ್ಟು ಹಣ್ಣುಗಳನ್ನು ತರಲು ಕಳುಹಿಸಿದಳು.

ಸೂರ್ಯ ಮುಳುಗುವಷ್ಟರಲ್ಲಿ ಚಿನ್ನದ ನೂಲುಗಳು ಗುಡಿಸಲು ಪೂರ್ತಿ ತುಂಬಿ ಅಂಗಳದಲ್ಲೂ ಬಿದ್ದಿದ್ದವು. ಪಕ್ಕದ ಊರಿಗೆ ಸಾಲದ ಬಡ್ಡಿ ವಸೂಲಿಗೆ ಹೋಗಿ ಬರುತ್ತಿದ್ದ ಜಿಪುಣ ಮುದುಕ ಸುಗುಣಳ ಮನೆ ಮುಂದೆ ಸಂಜೆಯ ಸೂರ್ಯನ ಮಂದ ಬೆಳಕಲ್ಲಿ ಹೊಳೆಯುತ್ತಿದ್ದ ಚಿನ್ನದ ಎಳೆಗಳನ್ನೂ, ಅವರ ಮನೆಯ ಸುತ್ತ ಜಮಾಯಿಸಿದ್ದ ಜನರನ್ನೂ ನೋಡಿದ. ತಕ್ಷಣವೇ ಓಡೋಡಿ ಬಂದು ಅತಿಯಾದ ವಿನಯದಿಂದ ಇದೆಲ್ಲಾ ಹೇಗೆ ಆಯಿತೆಂದು ಸುಗುಣಳ ಬಳಿ ಕೇಳಿ ತಿಳಿದು ಹೊಟ್ಟೆ ಕಿಚ್ಚಿನಿಂದ ಕುದ್ದು ಹೋದನು. 

Advertisement

ಭಿಕ್ಷುಕ ಮುದುಕಿಯನ್ನು ಹೊಡೆದು ಓಡಿಸಿದ್ದಕ್ಕೆ ಶ್ರೀಮಂತ ಪಶ್ಚಾತ್ತಾಪ ಪಟ್ಟನು. ಆ ಮುದುಕಿಯನ್ನು ಪತ್ತೆ ಹಚ್ಚಿ ಕರೆತರಲು ಕತ್ತಲನ್ನು ಲೆಕ್ಕಿಸದೆ ಕಾಡಿಗೆ ಹೊರಟನು. ಕಡೆಗೂ ಮುದುಕಿ ಸಿಕ್ಕಳು. ಶ್ರೀಮಂತ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳಿದನು. ಅವಳಿಗೆ ಹಣ್ಣು ಹಂಪಲು, ಸಿಹಿ ತಿಂಡಿಗಳನ್ನು ಕೊಟ್ಟು ಸುಗುಣಳನ್ನು ಆಶೀರ್ವದಿಸಿದಂತೆ ತನ್ನನ್ನೂ ಆಶೀರ್ವದಿಸು ಎಂದು ಬೇಡಿಕೊಂಡನು. ಮುದುಕಿ ನಗುತ್ತಾ, ತನ್ನ ಜೋಳಿಗೆಯಿಂದ ಕೋಲನ್ನು ತೆಗೆದು ಶ್ರೀಮಂತನ ತಲೆಯ ಮೇಲೆ ಕುಟ್ಟಿ, “ಹಾಗೇ ಆಗಲಿ, ನೀನು ನಾಳೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾವುದೇ ಕೆಲಸ ಮಾಡಿದರೂ ಅದು ಅಕ್ಷಯವಾಗಲಿ, ಬಿತ್ತಿದ್ದೇ ಬೆಳೆಯಲಿ’ ಎಂದು ಹೇಳಿ ಕಳುಹಿಸಿದಳು. 

ಸಂತೋಷದಿಂದ ಹಿರಿ ಹಿರಿ ಹಿಗ್ಗುತ್ತಾ ಮನೆಗೆ ಬಂದ ಮುದುಕ ತುಂಬಾ ಯೋಚಿಸಿ ಒಂದು ಚಿಕ್ಕ ಡಬ್ಬಿಗೆ ತನ್ನಲ್ಲಿದ್ದ ಚಿನ್ನದ ನಾಣ್ಯಗಳನ್ನು ತುಂಬಿಸಿಟ್ಟ. ಬೆಳಗಾದ ತಕ್ಷಣ ಆ ಡಬ್ಬಿಯಿಂದ ಚಿನ್ನದ ನಾಣ್ಯಗಳನ್ನು ಸುರಿದರೆ ಸಂಜೆಯವರೆಗೂ ಚಿನ್ನದ ನಾಣ್ಯಗಳು ಸುರಿಯುತ್ತಲೇ ಇರುತ್ತವೆ ಎಂದುಕೊಂಡ. ಇಡೀ ರಾತ್ರಿ ಬೆಳಗಾಗುವುದನ್ನೇ ಕಾಯುತ್ತಾ ನಿ¨ªೆಯೇ ಬರಲಿಲ್ಲ. ಸೂರ್ಯೋದಯವಾಗಲು ಸ್ವಲ್ಪ ಸಮಯವಿತ್ತು. ಒಳಗೆ ಹೋಗಿ ಚಿನ್ನದ ನಾಣ್ಯ ತುಂಬಿಸಿದ ಡಬ್ಬಿಯನ್ನು ತೆಗೆದುಕೊಂಡು ಬಂದ. ಆದರೆ ಆತ ಚಿನ್ನದ ನಾಣ್ಯಗಳಿದ್ದ ಡಬ್ಬವನ್ನು ತೆಗೆದುಕೊಳ್ಳುವುದಕ್ಕೆ ಬದಲಾಗಿ ಅದೇ ರೀತಿ ಕಾಣುತ್ತಿದ್ದ ಮತ್ತೂಂದು ಡಬ್ಬವನ್ನು ಎತ್ತಿಕೊಂಡು ಬಂದಿದ್ದ. ಅದು ಖಾರ ಪುಡಿ ಡಬ್ಬವಾಗಿತ್ತು. 

ನಿಜ ವಿಚಾರ ಗೊತ್ತಿಲ್ಲದ ಶ್ರೀಮಂತ ಚಿನ್ನದನಾಣ್ಯವೆಂದು ತಿಳಿದು ಡಬ್ಬವನ್ನು ನೆಲದಲ್ಲಿ ಸುರಿದ. ಖಾರದ ಪುಡಿಯ ಘಾಟಿಗೆ ಅವನಿಗೆ ಸೀನು ಬಂತು. ಅವತ್ತಿಡೀ ದಿನ ಖಾರದ ಪುಡಿ ಆ ಡಬ್ಬದಿಂದ ಸುರಿಯುತ್ತಲೇ ಇತ್ತು. ಸಂಜೆ ಸೂರ್ಯಾಸ್ತವಾಗುವಷ್ಟರಲ್ಲಿ ಸೀನಿ ಸೀನಿ ಅವನು ಸುಸ್ತಾಗಿದ್ದ. ಅವನ ದುರ್ಗತಿ ಕಂಡು ಅವನ ದುರಾಸೆಗೆ ತಕ್ಕ ಶಾಸ್ತಿಯಾಯಿತು ಎಂದುಕೊಂಡರು ಊರವರು.

 ಶ್ರುತಿ ಬಿ. ಆರ್‌.

Advertisement

Udayavani is now on Telegram. Click here to join our channel and stay updated with the latest news.

Next