ಬದಲಾವಣೆ ಜಗದ ನಿಯಮ , ನಾವು ಬದಲಾಗೋಣ ಮಕ್ಕಳನ್ನು ಬದಲಾವಣೆ ಮಾಡೋಣ. ಇಂದಿನ ಜಾಗತಿಕ ಯುಗದಲ್ಲಿ ಮೊಬೈಲ್ ಫೋನ್ ಎಂಬುದು ಪ್ರತಿಯೊಬ್ಬರಿಗೂ ಅವಶ್ಯಕ ಸಾಧನವಾಗಿದೆ. ಫೋನ್ ಒಂದು ನಮ್ಮ ಕೈಲಿ ಇದ್ದರೆ ಊಟ, ತಿಂಡಿ, ಓದು, ಹರಟೆ ಎಂಬ ಜಗತ್ತಿನ ನಿತ್ಯ ಪರಿಪಾಟಲನ್ನೇ ಮರೆತು ಬಿಡುತ್ತೇವೆ. ಹಾಗಾಗಿ ಇದನ್ನು ಮಾಯಾ ಪಟ್ಟಿಗೆ ಎಂದರೂ ತಪ್ಪಾಗದು.
ಮೊಬೈಲ್ ಫೋನ್‌ಗೆ ಈಗ ಅಬಾಲವೃದ್ಧರವರೆಗೂ ದಾಸರಿದ್ದಾರೆ. ನಿತ್ಯ ಜೀವನದಲ್ಲಿ ಮಾತನಾಡಲು, ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲು ಬಳಕೆ ಆಗುವ ಫೋನ್‌ಗಳು ಹೆಚ್ಚು ಯುವ ಸಮೂಹಗಳ ಆಕರ್ಷಕ ಗ್ಯಾಜೆಟ್ ಆಗಿದೆ. ಮಕ್ಕಳು ಅಳುತ್ತಾರೆ ಎಂದರೆ , ಊಟ ಮಾಡಿಸಲು, ನಿದ್ದೆ ಮಾಡಲು ಕೂಡ ಫೋನ್ ಬಳಕೆ ಮಾಡುವ ಮೂಲಕ ಫೋನ್ ಬಳಕೆ ಮಾಡುವ ಪ್ರಮೇಯ ಹುಟ್ಟಿಕೊಂಡಿದೆ ಹೀಗಾಗಿ ಮಕ್ಕಳಿಗೂ ಸಂಬಂಧ ಬಾಂಧವ್ಯಗಳ ಪರಿವು ಇರಲಾರದು, ಹೊರ ಪ್ರಪಂಚದ ಅರಿವು ಕೂಡ ಅವರಿಗೆ ಇರಲಾರದು.
ಹಿಂದಿನ ಕಾಲದಲ್ಲಿ ಯಾವುದೇ ತಂತ್ರಜ್ಞಾನಗಳಾಗಲಿ ಅಥವಾ ತಾಂತ್ರಿಕ ವಿದ್ಯಾಮಾನಗಳಾಗಲಿ ಇರಲಿಲಲ್ಲ. ಹಾಗಾಗಿ ವಸ್ತು ಖರೀದಿ ಮಾಡುವುದರಿಂದ ಹಿಡಿದು ಪ್ರತಿ ಸಣ್ಣ ಪುಟ್ಟ ವಿಚಾರಕ್ಕೂ ಖುಷಿ ಅರಸುವ ಜೀವನ ಅದಾಗಿತ್ತು ಆದರೆ ಈಗ ಕಾಲ ಬದಲಾಗಿದೆ. ಆನ್‌ಲೈನ್ ಆರ್ಡರ್ ಮಾಡುವ ಕಾರಣ ಎಲ್ಲ ವಿಚಾರಗಳು ನಿರಾಸಕ್ತಿಯಾಗಿದೆ. ಅದರಲ್ಲಿಯೂ ಎಳೆ ಮಕ್ಕಳು ಮತ್ತು ಯುವ ಸಮೂಹ ಈ ಮಾಯಾ ಪೆಟ್ಟಿಗೆಗೆ ಹೆಚ್ಚು ಅವಲಂಬಿಗಳಾಗುವುದು ಭವಿಷ್ಯದ ದೃಷ್ಟಿಯಿಂದ ಮಾರಕ ಎಂದರೂ ತಪ್ಪಾಗದು.
ಈಗ ನಮ್ಮ ನಡುವೆ ಜಗಳ ಮೂಡಲು ಕೂಡ ಈ ಸಾಮಾಜಿಕ ಜಾಲತಾಣಗಳು ಮತ್ತು ಅವುಗಳ ಬಳಕೆ ಕಾರಣವಾಗುತ್ತಿದೆ. ಅಪನಂಬಿಕೆ, ಅಸಮಧಾನ, ಜಗಳ, ಕೋಪ ಇವೆಲ್ಲಕ್ಕೂ ಈ ಮಾಯಾ ಪೆಟ್ಟಿಗೆ ಮೂಲ ಕಾರಣವಾಗುತ್ತಿದೆ. ನಮ್ಮ ಭವಿಷ್ಯ ಎತ್ತಿ ಹಿಡಿಯಬೇಕಾದ ಯುವ ಸಮೂಹಕ್ಕೆ ಈ ಮಾಯಾ ಪೆಟ್ಟಿಗೆ ಸಾಧಕ ಬಾಧಕದ ಅರಿವಾಗಲಿ ಇನ್ನಾದರು ಯುವ ಸಮೂಹ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಎಂಬುದೇ ನಮ್ಮ ಹಾರೈಕೆ.
- ಲಕ್ಷ್ಮೀ ಎಂ.ಕೆ.
ಬೆಂಗಳೂರು