Advertisement

ದೇಶದ ಆಗಸ ರಕ್ಷಣೆಗೆ ಕುಡ್ಲದ ಕುವರಿ

10:16 AM Mar 08, 2018 | |

ಸ್ನೇಹಿತೆಯ ಒತ್ತಾಯದ ಮೇರೆಗೆ ವಾಯುಪಡೆ ಪರೀಕ್ಷೆ ಬರೆದು ಯಶಸ್ವಿಯಾಗಿ ಈಗ ದೇಶಸೇವೆ ಮಾಡುತ್ತಿರುವ ಮಹಿಳೆಯೊಬ್ಬರ ಕಥೆ ಇದು. ಮಂಗಳೂರು ಮೂಲದ ಈ ಮಹಿಳೆಯ ಪತಿಯೂ ವಾಯುಪಡೆಯಲ್ಲಿದ್ದು, ಇಬ್ಬರೂ ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ವಿಶ್ವ ಮಹಿಳಾ ದಿನದ ಅಂಗವಾಗಿ ಈ ವಿಶೇಷ ಲೇಖನ.

Advertisement

ಮಂಗಳೂರು: ದೇಶಸೇವೆಗೈಯುವ ಭಾರತೀಯ ರಕ್ಷಣಾ ಪಡೆಗಳಿಗೆ ಮಹಿಳೆಯರೂ ಉತ್ಸಾಹದಿಂದ ಸೇರುತ್ತಾರೆ ಎಂದರೆ, ಜನ ಈಗಲೂ ಅಚ್ಚರಿಯಿಂದ ನೋಡುತ್ತಾರೆ. ಪುರುಷರಿಗಷ್ಟೇ ಸೀಮಿತ ಎಂಬಂತಿದ್ದ ರಕ್ಷಣಾಪಡೆಗಳಲ್ಲಿ ಮಹಿಳೆಯರೂ ದೊಡ್ಡ ಹುದ್ದೆಗಳನ್ನು ಸ್ವೀಕರಿಸಿ, ಯುದ್ಧ ಕಲೆಗಳಲ್ಲಿ ನಾವೂ ಪರಿಣತರು ಎಂದು ಸಾಬೀತು ಪಡಿಸಿ ಸಮಯವಾಯಿತು. ಇದಕ್ಕೆ ಮತ್ತೂಂದು ಹೆಸರು ಮಂಗಳೂರು ಮೂಲದ ಸ್ಕ್ವಾಡ್ರನ್‌ ಲೀಡರ್‌ ದೀಪಿಕಾ ಎಂ.

ನಗರದ ಕೋಡಿಕಲ್‌ ನಿವಾಸಿ ನಿವೃತ್ತ ಬ್ಯಾಂಕ್‌ ಉದ್ಯೋಗಿ ಲೋಹಿತಾಕ್ಷ ಹಾಗೂ ಆಶಾ ದಂಪತಿಗೆ ಇಬ್ಬರು ಮಕ್ಕಳು. ಅವರ ಪುತ್ರಿ ದೀಪಿಕಾ ಬಿಕಾಂ ಮುಗಿಸಿ ಮಂಗಳೂರಿನಲ್ಲಿ ಕಂಪೆನಿ ಸೆಕ್ರಟರಿ ಕೋರ್ಸ್‌ ಮಾಡಲು ಕೋಚಿಂಗ್‌ ಕಲಿತಿದ್ದರು. ಇದೇ ವೇಳೆ ಅವರು ಭಾರತೀಯ ವಾಯುಪಡೆ ಪರೀಕ್ಷೆ ಬರೆಯಲು ಹೋಗಿದ್ದು ಆಯ್ಕೆಯಾಗಿದ್ದರು.


ಸೇನಾ ಕಾರ್ಯಕ್ರಮವೊಂದರಲ್ಲಿ ಸ್ಕ್ವಾ|ಲೀ| ದೀಪಿಕಾ

ಸ್ನೇಹಿತೆಯ ಒತ್ತಾಸೆ
ವಾಯುಪಡೆ ಪರೀಕ್ಷೆ ಬರೆಯಲು ದೀಪಿಕಾ ಅವರಿಗೆ ಒತಾಯ ಮಾಡಿದ್ದು ಅವರ ಗೆಳತಿ, ಬೆಂಗಳೂರಿನಲ್ಲಿದ್ದ ವಾಯುಸೇನೆಯ ನಿವೃತ್ತಿ ಅಧಿಕಾರಿಯೋರ್ವರ ಪುತ್ರಿ. ಅವರೂ, ದೀಪಿಕಾ ಜತೆ ಪರೀಕ್ಷೆ ಬರೆದಿದ್ದರಾದರೂ, ದೀಪಿಕಾ ಮಾತ್ರ ಉತ್ತೀರ್ಣರಾದರು. ವಾಯುಪಡೆ ಸೇರಿದ ಬಳಿಕ 2004ರಿಂದ 2005ರವರೆಗೆ ತರಬೇತಿ ಪಡೆದು, 2005ರಲ್ಲಿ ಫ್ಲೈಯಿಂಗ್‌ ಆಫೀಸರ್‌ ಆಗಿ ಚಂಡೀಗಢದಲ್ಲಿ ನಿಯುಕ್ತರಾದರು. 2007ರಲ್ಲಿ ಫ್ಲೈಯಿಂಗ್‌ ಲೆಫ್ಟಿನೆಂಟ್‌ ಆಗಿ ಪದೋನ್ನತಿ ಹೊಂದಿದ್ದು, 2011ರಿಂದ ಸ್ಕ್ವಾಡ್ರನ್‌ ಲೀಡರ್‌ ಆಗಿ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪತಿಯೂ ವಾಯು ಸೇನೆಯಲ್ಲಿ ಸೇವೆ
ವಾಯುಪಡೆಯಲ್ಲಿ ವಿಂಗ್‌ಕಮಾಂಡರ್‌ ಆಗಿರುವ ಬೆಂಗಳೂರು ಮೂಲದ ಕಾರ್ತಿಕ್‌ ಅವರನ್ನು ದೀಪಿಕಾ ವರಿಸಿದ್ದಾರೆ. 2007ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಬಳಿಕ ಇಬ್ಬರೂ ದೇಶಸೇವೆಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ದೀಪಿಕಾ- ಕಾರ್ತಿಕ್‌ ಅವರಿಗೆ ಇಬ್ಬರು ಗಂಡು ಮಕ್ಕಳು. ಕಾರ್ತಿಕ್‌ ಅವರು ಉತ್ತರ ಪ್ರದೇಶದಲ್ಲಿ ಸೇವೆಯಲ್ಲಿದ್ದಾರೆ.

 
ಪತಿ ಮತ್ತು ಮಕ್ಕಳೊಂದಿಗೆ ದೀಪಿಕಾ.

Advertisement

ನಿರೀಕ್ಷೆ ಇರಲಿಲ್ಲ, ಪ್ರೋತ್ಸಾಹಿಸಿದೆವು
ಮಗಳು ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದಾಗ ನಾವದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ತರಬೇತಿ ಬಹು ಕಷ್ಟ ಎಂದು ತಿಳಿದಿತ್ತು. ಆದರೆ ದೇಶಸೇವೆಗೆ ಹೋಗುತ್ತೇನೆ ಎಂದು ಮಗಳು ಹೇಳಿದಾಗ ಕಣ್ಣು ಮುಚ್ಚಿ ಒಪ್ಪಿಕೊಂಡೆವು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ತರಬೇತಿ ಎಂದಾಗ ಭಯ ಆಗಿತ್ತು. ಆಕೆಯೊಂದಿಗೆ ರೂಮ್‌ನಲ್ಲಿದ್ದ ಹುಡುಗಿಯರೂ ಕಠಿನ ತರಬೇತಿ ಕಾರಣ ಎರಡು ವಾರಗಳ ಅಂತರದಲ್ಲಿ ಬಿಟ್ಟು ಹೋಗಿದ್ದರು. ದೀಪಿಕಾ ಕೂಡ ಫೋನ್‌ ಮಾಡಿ ವಾಪಾಸ್ಸಾಗುವ ಬಗ್ಗೆ ಹೇಳುತ್ತಿದ್ದಳು. ಆಗ ನಾನು ಹೈದರಾಬಾದ್‌ಗೆ ಹೋಗಿ ಧೈರ್ಯ ತುಂಬಿದ್ದೆ. ಬಳಿಕ ಉತ್ಸಾಹದಿಂದ ಪಾಲ್ಗೊಂಡಿದ್ದಳು ಎಂದು ದೀಪಿಕಾ ಅವರ ತಂದೆ ಲೋಹಿತಾಶ್ವ ಅವರು ನೆನಪಿಸಿಕೊಳ್ಳುತ್ತಾರೆ. 

ದೇಶ ಸೇವೆಗೆ ಮಹಿಳೆಯರು ಮುಂದೆ ಬನ್ನಿ
ವಾಯುಪಡೆ ಅಧಿಕಾರಿಯಾಗಿ ಆಯ್ಕೆಯಾಗಿದ್ದು ನನ್ನ ಭಾಗ್ಯ. ಮಹಿಳೆಯರಿಗೂ ರಕ್ಷಣಾ ಪಡೆ ಅಧಿಕಾರಿಗಳಾಗಲು ಅವಕಾಶವಿದೆ. ಹೆಚ್ಚೆಚ್ಚು ಧೈರ್ಯವಂತ, ಅರ್ಹತೆಯುಳ್ಳ ಮಹಿಳೆಯರು ಸೇನಾಧಿಕಾರಿಗಳಾಗಿ ಸೇವೆ ಸಲ್ಲಿಸಿದರೆ ದೇಶ ಸೇವೆಯ ಅನುಭವದ ಜತೆಗೆ ಒಂದು ಉತ್ತಮ ಕೆರಿಯರ್‌ ರೂಪಿಸಿಕೊಳ್ಳಬಹುದು. ವಾಯುಪಡೆಗೆ ಸೇರುತ್ತಿರುವ ಮಹಿಳೆಯರಲ್ಲಿ ಹೊರ ರಾಜ್ಯದವರೇ ಹೆಚ್ಚು. ನಮ್ಮ ಕರಾವಳಿ ಭಾಗದ ಮಹಿಳೆಯರ ಸಂಖ್ಯೆ ತೀರ ಕಡಿಮೆಯಿದೆ. ವಾಯುಪಡೆಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗಬೇಕು.
– ಸ್ಕ್ವಾ|ಲೀ| ದೀಪಿಕಾ 

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next