ರಾಮನಗರ: ನನಗೆ 2008ರಲ್ಲಿ ರಾಜಕೀಯ ದೀಕ್ಷೆಕೊಟ್ಟ ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತು ನನ್ನನಡುವೆ ತಂದೆ-ಮಗುವಿನ ಸಂಬಂಧವಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಹೇಳಿದರು.
ತಾಲೂಕಿನ ಬಿಡದಿಯ ತಮ್ಮ ನಿವಾಸದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಪತ್ರ, ಕಾಂಗ್ರೆಸ್ ನಾಯಕ ಎಚ್ .ಎಂ.ರೇವಣ್ಣ ಅವರು ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಅವರನ್ನು ಹೊಗಳುತ್ತಿರುವಕುರಿತು ಸುದ್ದಿಗಾರರು ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು. ಮಾಗಡಿ ಕ್ಷೇತ್ರವನ್ನು ಎಚ್. ಎಂ.ರೇವಣ್ಣ ಅವರು ಬೆಳ್ಳಿ ತಟ್ಟೆಯಲ್ಲಿ ಧಾರೆ ಎರೆದುಕೊಟ್ಟಿದ್ದಾರೆ. ಅವರ ಬಗ್ಗೆ ಇದ್ದ ವಿಷವನ್ನು ಬಾಲಕೃಷ್ಣ ಈಗ ಹೊರಹಾಕಿದ್ದಾರೆ ಎಂದು ಹೇಳಿದರು.
ರೇವಣ್ಣ ಇಮೇಜ್ ಕುಗ್ಗಿಸುವ ಸಂಚು!: ಸದ್ಯರಾಜ್ಯಸಭೆಗೆ ಮತ್ತು ರಾಜ್ಯ ವಿಧಾನ ಪರಿಷತ್‌ಗೆ ಚುನವಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಚ್.ಎಂ.ರೇವಣ್ಣ ಅವರ ಇಮೇಜ್ ಕುಗ್ಗಿಸುವ ಸಂಚು ನಡೆದಿದೆ ಎಂದು ಬಾಲಕೃಷ್ಣರನ್ನು ಕುಟುಕಿದರು. ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಪತ್ರವನ್ನು ಅವರೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ತೊರೆಯಲು ಒಂದು ಕಾರಣ ಬೇಕಾಗಿತ್ತು. ಅದಕ್ಕಾಗಿ ಈ ಹುನ್ನಾರ ಮಾಡಿದ್ದಾರೆ ಎಂದರು.
ರೇವಣ್ಣಗೆ ಸಪೋರ್ಟ್ ವಿಚಾರ ಉದ್ಬವಿಸೋಲ್ಲ: ಎಚ್.ಎಂ.ರೇವಣ್ಣ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವನ್ನ ಅವರು ಹೇಳಿಲ್ಲ. ನಾನು ಅವರಿಗೆ ಸಪೋರ್ಟ್ ಮಾಡುವ ವಿಚಾರವೂ ಉದ್ಬವಿಸುವುದಿಲ್ಲ. ರೇವಣ್ಣರ ಫೋಟೋ ಕೇವಲ ನನ್ನ ಕಚೇರಿಯಲ್ಲಿ ಮಾತ್ರವಲ್ಲ, ನನ್ನ ಹೃದಯದ ಅಂತರಾಳದಲ್ಲಿ ಇಟ್ಟುಕೊಂಡಿದ್ದೇನೆ ಎಂದು ಬಾಲಕೃಷ್ಣರ ಮತ್ತೂಂದು ಹೇಳಿಕೆಗೆ ಪ್ರತಿಕ್ರಿಯಿಸಿದರು. ನನಗೆ ರೇವಣ್ಣನವರು ಗುರುಗಳ ಸ್ಥಾನದಲ್ಲಿದ್ದಾರೆ.
ಬಾಲಕೃಷ್ಣ ಅವರು ಜೆಡಿಎಸ್‌ನಲ್ಲಿದ್ದಾಗ ದೇವೇ ಗೌಡರು, ಕುಮಾರಸ್ವಾಮಿರನ್ನ ನೆನೆಯಲಿಲ್ಲ. ಹಿಂದೆ ಬಿಜೆಪಿಯಲ್ಲಿ ಇದ್ದಾಗಲೂ ಅಲ್ಲಿ ಸಹಾಯಮಾಡಿದವರನ್ನ ನೆನೆಯಲಿಲ್ಲ. ಈಗ ಕಾಂಗ್ರೆಸ್‌ನಲ್ಲಿ ಯಾರಿಗೂ ಗೌರವ ಕೊಡ್ತಿಲ್ಲ. ಈ ವಿಚಾರ ಆ ಪಕ್ಷದ ವರಿಷ್ಠರಿಗೂ ಗೊತ್ತಿದೆ. ಇದು ಬಾಲಕೃಷ್ಣಗೆ ಇರುವ ಚಾಳಿ ಎಂದು ಟೀಕಾ ಪ್ರಹಾರ ನಡೆಸಿದರು.