ಬದಿಯಡ್ಕ: ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಬಿವರೇಜಸ್ ಮಳಿಗೆ ಮುಳ್ಳೇರಿಯಾಕ್ಕೆ ಸ್ಥಳಾಂತರಗೊಂಡ ನಂತರ ಬದಿಯಡ್ಕದಲ್ಲಿ ಮತ್ತೆ ಮದ್ಯದಂಗಡಿ ಪ್ರಾರಂಭಿಸಲು ಹುನ್ನಾರ ನಡೆಯುತ್ತಿದ್ದು, ಇದು ಬದಿಯಡ್ಕದ ನೆಮ್ಮದಿಗೆ ಭಂಗ ತರಬಹುದೇ ಎಂಬ ಭಯ ಸ್ಥಳೀಯರಿಗೆ ಉಂಟಾಗಿದೆ.
ಈ ಹಿಂದೆ ಬದಿಯಡ್ಕ ಪೇಟೆಯಲ್ಲಿ ಮದ್ಯದಂಗಡಿ ಕಾರ್ಯಾಚರಿಸುತ್ತಿದ್ದಾಗ ಮಧ್ಯಪಾನಿಗಳಿಂದ ಕ್ಷುಲ್ಲಕ ಕಾರಣ ಗಲಾಟೆ ಮತ್ತು ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಗಳು ಕೂಡ ನಡೆಯುತ್ತಿತ್ತು. ಮಳಿಗೆ ಸ್ಥಳಾಂತರಗೊಂಡ ನಂತರ ಬದಿಯಡ್ಕ ಪೇಟೆಯಲ್ಲಿ ಸೇರುವ ಸಾರ್ವಜನಿಕರ ಸಂಖ್ಯೆ ಆರ್ಧಕ್ಕೆ ಕುಸಿದಿದ್ದು ಪೇಟೆಯಲ್ಲಿ ಯಾವುದೇ ರೀತಿಯ ಪ್ರಕರಣಗಳು ನಡೆಯದೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು.
ಆದರೆ ಕಾಸರಗೋಡಿನ ಅಣಂಗೂರಿನಲ್ಲಿ ಮುಚ್ಚಿರುವ ಮದ್ಯದಂಗಡಿಯು ಕೆಲವು ರಾಜಕಾರಣಿಗಳ ಹಸ್ತಕ್ಷೇಪದಿಂದ ಮತ್ತೆ ಬದಿಯಡ್ಕ ಸಮೀಪದ ಚೆನ್ನಾರ ಕಟ್ಟೆಯಲ್ಲಿ ಪ್ರಾರಂಭವಾಗುತ್ತದೆ ಎಂಬ ವ್ಯಾಪಕ ಪ್ರಚಾರ ಹರಡಿಕೊಂಡಿದ್ದು ಇದರ ವಿರುದ್ಧ ನಾಗರಿಕರು ವ್ಯಾಪಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಚೆನ್ನಾರ ಕಟ್ಟೆಯ ಚಾಲಕರೊಬ್ಬರ ಮನೆಯನ್ನು ಮದ್ಯದಂಗಡಿ ತೆರೆಯಲು ಮನೆ ಬಾಡಿಗೆ ನೀಡಬೇಕು ಎಂಬುದಾಗಿ ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಇದನ್ನು ಪ್ರತಿಭಟಿಸಲು ಸ್ಥಳೀಯರು ಸಹಿ ಸಂಗ್ರಹಿಸಿ ಪ್ರತಿಭಟನೆ ಆರಂಬಿಸಿದ್ದಾರೆ.
ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ಸಚಿವ ಚಂದ್ರ ಶೇಖರನ್, ಮುಖ್ಯಮಂತ್ರಿ ಮೊದಲಾದವರಿಗೆ ಮನವಿ ನೀಡಲಾಗಿದೆ.ಬದಿಯಡ್ಕದ ಚೆನ್ನಾರ ಕಟ್ಟೆಯಲ್ಲಿ ಮತ್ತೆ ಮದ್ಯದಂಗಡಿ ತೆರೆಯುವುದನ್ನು ಪ್ರತಿಭಟಿಸಿ ಪಂಚಾಯತ್ ಸದಸ್ಯ ವಿಶ್ವನಾಥ ಪ್ರಭು ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಯಾವುದೇ ಕಾರಣಕ್ಕೂ ಬದಿಯಡ್ಕ ಪ್ರದೇಶದಲ್ಲಿ ಮತ್ತೆ ಮದ್ಯದಂಗಡಿ ಪ್ರಾರಂಭಿಸಲು ಬಿಡುವುದಿಲ್ಲ. ಇದನ್ನು ಯಾವ ಬೆಲೆತೆತ್ತಾದರೂ ತಡೆಯುವುದಾಗಿ ಅವರು ಎಚ್ಚರಿಸಿದ್ದಾರೆ.