ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ. “ಹೆಚ್’ ಎನ್ನುವುದು ಚಿತ್ರದ ಹೆಸರಾದರೆ, “ಯಾರಿಗೆ’ ಎಂಬುದು ಶೀರ್ಷಿಕೆ ಅಡಿಬರಹ. ಶೀರ್ಷಿಕೆಯೇ ವಿಭಿನ್ನವಾಗಿದೆ. ಹಾಗಾದರೆ, ಸಿನಿಮಾ ಹೇಗಿದೆ? ಇದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು. ಈ ಚಿತ್ರದ ಮೂಲಕ ಲಕ್ಷ್ಮೀರಾಜ್ ಶೆಟ್ಟಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹೀರೋ ಕೂಡ ಆಗಿದ್ದಾರೆ.
ಇಲ್ಲಿ “ಹೆಚ್’ ಅಂದರೆ ಏನರ್ಥ? ಅದಕ್ಕೆ ಉತ್ತರಿಸುವ ನಿರ್ದೇಶಕರು, “ಈ ಹೃದಯದ ಪ್ರೀತಿ ಹುಚ್ಚು ಎಲ್ಲರಿಗೂ ಕಿಚ್ಚು ಬರುವಂತೆ ಮಾಡುತ್ತೆ. ಅದೇ ಅರ್ಥ ಶೀರ್ಷಿಕೆಯಲ್ಲೂ ಉಂಟು. ಅದು ಸಿನಿಮಾ ನೋಡಿದಾಗ ಎಲ್ಲವೂ ಅರ್ಥವಾಗುತ್ತೆ’ ಅನ್ನುತ್ತಾರೆ ನಿರ್ದೇಶಕರು. “ಒಂದು ಹೆಣ್ಣು ಹೇಗೆ ಮೋಸ ಹೋಗುತ್ತಾಳ್ಳೋ, ಹಾಗೆ ಗಂಡು ಕೂಡ ಅದೇ ರೀತಿ ಮೋಸ ಹೋಗುತ್ತಾನೆ ಮತ್ತು ಮಾಡುತ್ತಾನೆ ಅನ್ನೋದು ಸಿನಿಮಾದ ಕಥೆ. ಇಲ್ಲಿ ಕುತೂಹಲಕಾರಿ ಅಂಶಗಳಿವೆ. ಹೊಸಬಗೆಯ ಚಿತ್ರದಲ್ಲಿ ಎಲ್ಲವೂ ಹೊಸತನದಿಂದ ಕೂಡಿವೆ. ಬೆಂಗಳೂರು, ಚೆನ್ನಪಟ್ಟಣ, ರಾಮನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಕಡಿಮೆ ಬಜೆಟ್‌ನಲ್ಲಿ ಒಂದು ಗುಣಮಟ್ಟದ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.
ಇನ್ನು, ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಹಿಂದೆ ಮಂಜು ಕವಿ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ, ಭಕ್ತಿಗೀತೆಗಳ ಆಲ್ಬಂ ಮಾಡಿದ್ದಾರೆ. ಅವರಿಗೆ ಇದು ಹೊಸ ಅನುಭವವಂತೆ. ಚಿತ್ರದಲ್ಲಿ ರಾಯಚೂರು ಮೂಲದ ಜ್ಯೋತಿಗೆ ಇಲ್ಲಿ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಪಾತ್ರ ಸಿಕ್ಕಿದೆಯಂತೆ. ಅವಳಿಗೊಂದು ನ್ಯೂನ್ಯತೆ ಇದ್ದು, ಅದೇ ಸಿನಿಮಾಗೊಂದು ತಿರುವು ಎನ್ನುತ್ತಾರೆ ಅವರು. ಶಿಕಾರಿಪುರದ ವಿದ್ಯಾ ಶೆಟ್ಟಿಗಾರ್ ಎಂಬ ಮತ್ತೂಬ್ಬ ನಾಯಕಿಯೂ ಇಲ್ಲಿದ್ದಾರೆ. ಅವರಿಲ್ಲಿ ಪ್ರೀತಿ ನಂಬಿ ಯಾವ ರೀತಿ ಮೋಸ ಹೋಗುವ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಇನ್ನೊಬ್ಬ ನಾಯಕಿಯೂ ಇದ್ದಾರೆ. ಅವರ ಪಾತ್ರವೇ ಚಿತ್ರಕ್ಕೊಂದು ಜೀವಾಳ ಎಂಬುದು ಚಿತ್ರತಂಡದ ಮಾತು.
ಚಿತ್ರಕ್ಕೆ ವಿನಯ್ ಗೌಡ ಕ್ಯಾಮೆರಾ ಹಿಡಿದರೆ, ಎ.ಆರ್.ಕೃಷ್ಣ ಸಂಕಲನ ಮಾಡಿದ್ದಾರೆ. ಇನ್ನು, ಈ ಚಿತ್ರವನ್ನು ನಿರ್ಮಿಸಿರೋದು, ಚಿತ್ರಮಂದಿರದಲ್ಲಿ ಗೇಟ್‌ಕೀಪರ್ ಆಗಿ, ವಿತರಕರಾಗಿ, ಆ ಬಳಿಕ ನಿರ್ಮಾಣ ನಿರ್ವಹಣೆ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡಿ ಸುಮಾರು 24 ವರ್ಷ ಅನುಭವ ಪಡೆದಿರುವ ಬ್ರಿಜೇಶ್ ಕುಮಾರ್. ಇವರ ಜತೆಗೆ ಗೆಳಯ ಮಹೇಂದ್ರ ವರಕೂಡು ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ಕರುಣಿಸಿದೆ.