Advertisement

ರಾಜ್ಯ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲು ಒತ್ತಾಯ

05:40 PM Sep 01, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿ ಒಂದೂವರೆ ವರ್ಷ ಕಳೆದಿದ್ದು, ಕೂಡಲೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.

Advertisement

ಸಂಘದ ರಾಜ್ಯಾಧ್ಯಕ್ಷ ಬಿ.ಆರ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ದೀಪಕ್ ವಿ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಡಿವಾಳ ಜನಾಂಗ ನಡೆಸಿದ ಬಹು ದಿನಗಳ ಹೋರಾಟದ ಫಲವಾಗಿ ನಿಗಮ ಸ್ಥಾಪನೆಯಾಗಿದೆ. ಆದರೆ ನಿಗಮದ ಸೌಲಭ್ಯಗಳನ್ನು ಜನಾಂಗಕ್ಕೆ ತಲುಪಿಸುವ ಕನಸು ಇನ್ನೂ ಸಾಕಾರಗೊಂಡಿಲ್ಲ. ಕೋವಿಡ್ ಸಂಕಷ್ಟದಿಂದ ಮಡಿವಾಳ ಸಮುದಾಯ ತೀವ್ರ ತೊಂದರೆಯಲ್ಲಿದೆ. ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಹುತೇಕ ಮಂದಿ ಇದೀಗ ಆರ್ಥಿಕ ಮುಗ್ಗಟ್ಟಿನಿಂದ ನಲುಗಿದ್ದಾರೆ. ಇಂತಹ ಸಂದರ್ಭದಲ್ಲಿ ನಿಗಮ ಜನರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಬೇಕು ಎಂದಿದ್ದಾರೆ.

ಕಳೆದ ವರ್ಷ ಬಜೆಟ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಮನವಿಗೆ ಓಗೊಟ್ಟು ನಿಗಮಕ್ಕೆ 25 ಕೋಟಿ ರೂ ಹಣ ನಿಗದಿಮಾಡಿ 6 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಆದರೆ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸದ ಕಾರಣ ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ. ಹೀಗಾಗಿ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿದರೆ ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಮಹಾನಗರ ಪಾಲಿಕೆ ಚುನಾವಣೆ: 60ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ| ಕಟೀಲ್‌

ಮಾಜಿ ವಿಧಾನಪರಿಷತ್ ಶಂಕರಪ್ಪ ಅವರನ್ನು ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು, ಆದರೆ ಅವರು ಈ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ತೋರಲಿಲ್ಲ. ಹೀಗಾಗಿ ನಿಗಮ ಸ್ಥಾಪನೆಯಾದ ನಂತರದಿಂದ ಈ ವರೆಗೆ ಸಾರಥಿ ಇಲ್ಲದೇ ಅನಾಥವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಕಾರ್ಯಯೋಜನೆಗಳನ್ನು ಮುಂದುವರೆಸುವುದಾಗಿ ರಾಜ್ಯದ ಜನರಿಗೆ ಅಭಯ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಸ್ಥಾಪಿಸಿದ ನಿಗಮಕ್ಕೆ ಸೂಕ್ತ ಮತ್ತು ಅರ್ಹರನ್ನು ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ದೇಶಾದ್ಯಂತ ಜಾತಿ ಜನಗಣತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ನಮ್ಮ ಸಂಘದಿಂದ ಮಡಿವಾಳ ಜನಾಂಗದ ಜನಸಂಖ್ಯೆಯ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ನಿಗಮದಿಂದ ಜನತೆಗೆ ದೊರೆಯಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಜನಾಂಗವನ್ನು ಮೇಲೆತ್ತಲು ಈ ಮಾಹಿತಿ ಎಲ್ಲಾ ರೀತಿಯಲ್ಲೂ ನೆರವಾಗುತ್ತೇವೆ. ಆದರೆ ನಿಗಮ ಸ್ಥಾಪನೆಯ ಮೂಲ ಉದ್ದೇಶ ಈಡೇರಬೇಕಾದರೆ ಅಧ್ಯಕ್ಷರು, ಸದಸ್ಯರ ನೇಮಕಾತಿ ಅತ್ಯಂತ ಅಗತ್ಯ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಆರ್. ಪ್ರಕಾಶ‍್ ಹೇಳಿದ್ದಾರೆ.

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಬಹು ದಿನಗಳಿಂದ ಬೇಡಿಕೆ ಇಟ್ಟಿದ್ದು, ನಮ್ಮ ಮನಗೆ ಸರ್ಕಾರದಿಂದ ಈ ವರೆಗೆ ಸ್ಪಂದನೆ ದೊರೆತಿಲ್ಲ. ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next