Advertisement

ಕೊಡಗಿನಲ್ಲಿ ಅರಳಿದ ತಾವರೆ: ಬೋಪಯ್ಯ, ಅಪ್ಪಚ್ಚು ರಂಜನ್‌ಗೆ ಗೆಲುವು

06:45 AM May 16, 2018 | Team Udayavani |

ಮಡಿಕೇರಿ: ಎರಡೂ ಕ್ಷೇತ್ರ ಗಳಲ್ಲಿ ಗೆಲುವಿನ ನಗು ಬೀರುವ ಮೂಲಕ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಪಕ್ಷ ಸುಭದ್ರವಾಗಿದೆ ಎನ್ನುವುದನ್ನು ಕಾರ್ಯಕರ್ತರು ಮತ್ತೆ ಸಾಬೀತುಪಡಿಸಿದ್ದಾರೆ.

Advertisement

ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಜಿಲ್ಲೆ ಕಮಲದ ಭದ್ರಕೋಟೆ ಎನ್ನುವುದನ್ನು ಮತ್ತೂಮ್ಮೆ ನಿರೂಪಿಸಿದೆ. ಬಿಜೆಪಿ  ಭದ್ರಕೋಟೆ  ಭೇದಿಸುವ ಕಾಂಗ್ರೆಸ್‌ ಹಾಗೂ  ಜೆಡಿಎಸ್‌ ಪ್ರಯತ್ನಗಳು ಸಂಪೂರ್ಣವಾಗಿ ವಿಫ‌ಲವಾಗಿವೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ. ಅಪ್ಪಚ್ಚುರಂಜನ್‌ ಅವರು ಗೆಲುವು ಸಾಧಿಸುವ ಮೂಲಕ ಸತತ 5ನೇ ಬಾರಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಿ. ಬೋಪಯ್ಯ ಅವರು ಗೆಲುವು ಸಾಧಿಸುವ ಮೂಲಕ 4ನೇ ಬಾರಿ ವಿಧಾನಸಭೆಯ ಮೆಟ್ಟಿಲೆೇರಿದ ಸಾಧನೆ ಮಾಡಿದ್ದಾರೆ. 

ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿರುವುದು ಗಮನಾರ್ಹ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಿ. ಅಪ್ಪಚ್ಚುರಂಜನ್‌ 70,631 ಮತಗಳ‌ನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.  ಎದುರಾಳಿ ಬಿ.ಎ.   ಜೀವಿಜಯ 54,616 ಮತಗಳನ್ನಷ್ಟೆ ಪಡೆಯಲು ಶಕ್ತರಾಗುವ ಮೂಲಕ 16,015 ಮತಗಳ ಅಂತರದ ಸೋಲನ್ನು ಕಾಣು ವಂತಾಯಿತು.

Advertisement

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಪಿ. ಚಂದ್ರಕಲಾ 38,219 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುrಕೊಂಡರು. ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸಂಕೇತ್‌ ಪೂವಯ್ಯ 11,224 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ನೋಟಾ ದಾಖಲೆ
ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಕಂಡು ಬಂದ ನೋಟಾ ಓಟುಗಳು ಗಾಬರಿ ಮೂಡಿಸಿದ್ದು, ಮಡಿಕೇರಿ ಕ್ಷೇತ್ರದಲ್ಲಿ ನೋಟಾಕ್ಕೆ 1,615 ಮತಗಳು ಬಿದ್ದಿದ್ದರೆ, ವೀರಾಜಪೇಟೆ ಕ್ಷೇತ್ರದಲ್ಲಿ ಈ ಸಂಖ್ಯೆ 1,733.

ಸೋಮವಾರಪೇಟೆ: ಸಂಭ್ರಮಿಸಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು
ಸೋಮವಾರಪೇಟೆ:
ತೀವ್ರ ಕುತೂಹಲ ಮೂಡಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫ‌ಲಿತಾಂಶ ಹೊರಬಿದ್ದಿದ್ದು, ಹಾಲಿ ಶಾಸಕ ಅಪ್ಪಚ್ಚುರಂಜನ್‌ ಅವರು ದಾಖಲೆಯ ಐದನೇ ಗೆಲುವು ಸಾಧಿಸಿದ್ದಲ್ಲದೆ, ಹ್ಯಾಟ್ರಿಕ್‌ ಸಾಧಿಸುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ಹೊಸ ದಾಖಲೆ ಸ್ಥಾಪಿಸಿದರು.  

ಮಧ್ಯಾಹ್ನ 12.30ರ ವೇಳೆಗೆ ದೃಶ್ಯವಾಹಿನಿಗಳಲ್ಲಿ ಗೆಲುವಿನ ಅಂತರ 13 ಸಾವಿರ ದಾಟುತ್ತಿದ್ದಂತೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಅಲ್ಲದೇ ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು. ನಂತರ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅಪ್ಪಚ್ಚುರಂಜನ್‌ರವರ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿದರು. 

ಪಕ್ಷದ ಅಭ್ಯರ್ಥಿ ರಂಜನ್‌ರವರ ಗೆಲುವಿನ ಕುರಿತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬಿ.ಡಿ.ಮಂಜುನಾಥ್‌ ಪ್ರತಿಕ್ರಿಯಿಸಿ, ಕೊಡಗಿನಲ್ಲಿ ಬಿಜೆಪಿ ಭದ್ರಕೋಟೆ ಎಂದು ಮತ್ತೂಮ್ಮೆ ಸಾಬೀತಾಗಿದೆ. ಕ್ಷೇತ್ರದಲ್ಲಿ ಜಾತೀಯತೆಯ ಮೂಲಕ ಗೆಲುವು ಸಾಧಿಸಲು ಎಂದು ತಮ್ಮ ಪಕ್ಷವೂ ಸೇರಿದಂತೆ ಯಾವ ಪಕ್ಷದವರಿಗೂ ಸಾಧ್ಯವಿಲ್ಲ ಎಂಬುದನ್ನು ಮತದಾರರು ಸಾಬೀತುಪಡಿಸಿದ್ದಾರೆ. ಹತ್ತು ಸಾವಿರ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಭಾವಿಸಿದ್ದೆವು. ಶಾಸಕ ಅಪ್ಪಚ್ಚುರಂಜನ್‌ಅವರ ಜನಪರ ಕಾರ್ಯಗಳು ಅವರಿಗೆ ಶ್ರೀರಕ್ಷೆಯಾಯಿತು.
 
ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಬಿಜೆಪಿ ಮುಖಂಡ ಭರತ್‌ಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆ, ಪ್ರಧಾನಿ ಮೋದಿ ಅಲೆ, ಯಡಿಯೂರಪ್ಪ ಸಮರ್ಥ ನಾಯಕತ್ವ ಹಾಗೂ ಹಿಂದೂತ್ವದ ಅಲೆ ಮತ್ತು ಯುವ ಮತದಾರರು, ಕಾರ್ಯಕರ್ತರ ಸಹಕಾರದಿಂದ ಭರ್ಜರಿ ಗೆಲುವು ಸಾಧ್ಯವಾಯಿತು ಎಂದರು. 

ಜಿಲ್ಲಾ ಬಿಜೆಪಿ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್‌ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿ, ಈ ಬಾರಿಯ ಚುನಾವಣೆ ಯಲ್ಲಿ ಜಿಲ್ಲೆಯ ಮತದಾರರು ಇತರೆ ಪಕ್ಷಗಳಿಗೆ ತಕ್ಕಪಾಠ ಕಲಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರುಗಳ ಅಭಿವೃದ್ಧಿಪರ ಚಿಂತನೆಯಿಂದ ಗೆಲುವು ಸಾಧ್ಯವಾಗಿದೆ. ಕೊಡಗು ಬಿಜೆಪಿಯ ಭದ್ರಕೋಟೆ ಎಂದು ಮತ್ತೂಮ್ಮೆ ಸಾಬೀತು ಪಡಿಸಿರುವ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದ ಅರ್ಪಿಸಿದರು. 

ಅಪ್ಪಚ್ಚು ರಂಜನ್‌ ಹ್ಯಾಟ್ರಿಕ್‌ ಗೆಲುವು!
1952ರಿಂದ ಆರಂಭಗೊಂಡ ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಈವರೆಗೆ ಯಾವುದೇ ಪಕ್ಷದ ಅಭ್ಯರ್ಥಿಗಳು ಕೂಡ ಹ್ಯಾಟ್ರಿಕ್‌ ಗೆಲುವು ಸಾಧಿಸಿರಲಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಪ್ಪಚ್ಚುರಂಜನ್‌ರವರು ಸತತ ಮೂರನೇ ಬಾರಿಗೆ ಜಯಭೇರಿ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎ.ಎಂ.ಬೆಳ್ಯಪ್ಪ ಅವರು 19,146 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಬಿ.ಶಿವಪ್ಪ ಅವರ ವಿರುದ್ಧ ಜಯಿಸಿದ್ದರು. ನಂತರ 2008ರಲ್ಲಿ ಕ್ಷೇತ್ರ ವಿಂಗಡಣೆ ಆದ ನಂತರ ಸತತವಾಗಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ರಂಜನ್‌ರವರು ಹ್ಯಾಟ್ರಿಕ್‌ ಜತೆಗೆ 16,015 ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಮತ್ತೂಂದು ದಾಖಲೆ ನಿರ್ಮಿಸಿದರು. 1994ರಿಂದ 2018ರವರೆಗೆ ಸತತ ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ರಂಜನ್‌, 2004ರಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಜೀವಿಜಯರೊಂದಿಗೆ ಸೋಲನ್ನಪ್ಪಿದ್ದರು. 1994-2013ರ ಐದು ಚುನಾವಣೆಗಳಲ್ಲಿ ರಂಜನ್‌ರವರು ಪಡೆದ ಮತಗಳ ಅಂತರ 16,715 ಆಗಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಅಂತರ 16,015 ಆಗಿರುವುದು ವಿಶೇಷವಾಗಿತ್ತು. 

ಶನಿವಾರಸಂತೆ: ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಶನಿವಾರಸಂತೆ: 
ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್‌ ಗೆಲುವಿನ ಮುನ್ನಡೆಯಲ್ಲಿರುವ ವಿಚಾರತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಗೆಲುವಿನ ಸೂಚಕವಾಗಿ ವಿಜಯೋತ್ಸವ ಆಚರಿಸಿದರು. ಮಧ್ಯಾಹ್ನ 12 ಗಂಟೆಯ ನಂತರ ಬಿಜೆಪಿ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿಗಿಂತ 11 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿ ದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡರು. 

ಪಟ್ಟಣದ ಬನ್ನಿಮಂಟಪದಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಬಂದ ನೂರಾರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದ ಧ್ವಜಹಿಡಿದು ಟೋಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡವನ್ನು ಧರಿಸಿ ಪಟ್ಟಣದ ಕೆಆರ್‌ಸಿ ವೃದ್ದದ ವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ಶಾ, ರಾಜ್ಯದ ಬಿಜೆಪಿ ಅಧ್ಯಕ್ಷ ಬಿ.ಎಸ್‌.  ಯಡಿಯೂರಪ್ಪ, ಮಡಿಕೇರಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್‌, ವೀರಾಜ ಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರವಾಗಿ ಜಯಕಾರದ ಘೋಷಣೆ ಗಳನ್ನು ಕೂಗಿದರು. ವಿಜಯೋತ್ಸವದ ಸಂಕೇತಿಕವಾಗಿ ಪಕ್ಷದ ಕಾರ್ಯಕರ್ತರು ಕೆಆರ್‌ಸಿ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶನಿವಾರಸಂತೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್‌.ಎನ್‌.ರಘು-ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಜಿಲ್ಲೆಯ ಮತದಾರರ ಮೇಲೆ ಪರಿಣಾಮ ಬೀರಿದೆ, ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರವನ್ನು ಮತದಾರರು ತಲೆ ಕೆಳಗೆ ಮಾಡಿದ್ದಾರೆ. ಕೇಂದ್ರ ಸರಕಾರದ ಉತ್ತಮ ಆಡಳಿತ ಮತ್ತು ರಾಜ್ಯ ಸರಕಾರದ ದುರಾಡಳಿತದಿಂದ ಕೊಡಗು ಜಿಲ್ಲೆ ಅಭಿವೃದ್ಧಿಯಾಗದಿರುವುದನ್ನು ಮತದಾರರು ಗಮನಿಸುವ ಮೂಲಕ ಬಿಜೆಪಿಯನ್ನು ಬೆಂಬಲಿಸಿದ್ದಾರೆ, ಈ ಮೂಲಕವಾಗಿ ಜಿಲ್ಲೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತದಾರರು ಕಾರಣರಾಗಿದ್ದಾರೆ ಎಂದರು.

ವಿಜಯೋತ್ಸವ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್‌ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಪಟೇಲ್‌ ಪ್ರಸಾದ್‌, ಎಚ್‌.ಆರ್‌. ಹರೀಶ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next