Advertisement

ಮಡಿಕೇರಿ: ರಸ್ತೆ ದುರಸ್ತಿಗಾಗಿ ಆಗ್ರಹ : ವೀರವೇ ಪ್ರತಿಭಟನೆ

02:21 PM Jan 04, 2018 | Team Udayavani |

ಮಡಿಕೇರಿ: ಹೊಂಡ ಗುಂಡಿ ಗಳಿಂದ ಕೂಡಿ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗದ ನಗರಸಭೆಯ ಕಾರ್ಯವೈಖರಿಯನ್ನು ಖಂಡಿಸಿ ವೀರನಾಡು ರಕ್ಷಣಾ ವೇದಿಕೆ ಹಿಲ್‌ ರಸ್ತೆಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿತು.

Advertisement

ಗುಂಡಿ ಬಿದ್ದ ಹಿಲ್‌ರೋಡ್‌ನ‌ ಕಾಂಕ್ರೀಟ್‌ ರಸ್ತೆಯಲ್ಲಿ ಅಪಾಯಕಾರಿಯಾಗಿ ಹೊರ ಚಾಚಿರುವ ಕಬ್ಬಿಣದ ಸರಳುಗಳಿಗೆ ಕೆಂಪು ರಿಬ್ಬನ್‌ ಕಟ್ಟಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಪ್ರತಿಭಟನಕಾರರು ಖಂಡಿಸಿದರು. ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್‌ ಜಿ.ಆಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ಥಳಕ್ಕಾಗಮಿಸಿದ ಪೌರಾಯುಕ್ತರಾದ ಬಿ.ಶುಭ ಅವರನ್ನು ತರಾಟೆಗೆ ತೆಗೆದುಕೊಂಡರು. ಜ. 5ರೊಳಗಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿದ್ದಲ್ಲಿ ನಿರಂತರ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

 ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ಜನವರಿ 5 ರ ಒಳಗಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಕಪ್ಪು ಪಟ್ಟಿಗೆ ಆತನನ್ನು ಸೇರಿಸುವುದಾಗಿ ಇದೇ ಸಂದರ್ಭ ಭರವಸೆ ನೀಡಿದರು.

 ವೀರವೇ ಅಧ್ಯಕ್ಷ ಹರೀಶ್‌ ಆಚಾರ್ಯ ಮಾತನಾಡಿ, ನಮ್ಮ ಪ್ರತಿಭಟನೆ ಕೇವಲ ಹಿಲ್‌ ರಸ್ತೆಗೆ ಮಾತ್ರ ಸೀಮಿತವಾಗಿಲ್ಲ. ನಗರದ ಬಹುತೇಕ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಪಾದಚಾರಿಗಳಿಗೆ ಮತ್ತು ವಾಹನಗಳಿಗೆ ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಈ ವಿಚಾರವಾಗಿ ಹಲವಾರು ಬಾರಿ ನಗರಸಭೆಗೆ ಮನವಿ ನೀಡಿದ್ದರೂ ಸೂಕ್ತ ಸ್ಪಂದನೆ ದೊರಕಿಲ್ಲ. ಒಳಚರಂಡಿ  (ಯುಜಿಡಿ) ಯೋಜನೆಯಡಿ ರಸ್ತೆಗಳನ್ನು ಅಗೆದು ಪೈಪ್‌ ಅಳವಡಿಕೆ ಮತ್ತು ಚೇಂಬರ್‌ಗಳನ್ನು ನಿರ್ಮಿಸಲಾಗಿದ್ದರು, ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚುವ, ಡಾಮರೀಕರಣ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

 ನಗರಸಭೆ ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಇದೇ ರೀತಿಯ ನಿರ್ಲಕ್ಷ್ಯದಿಂದ ಮೂರು ನಾಲ್ಕು ತಿಂಗಳು ಕಳೆದು ಹೋದಲ್ಲಿ ಮಳೆಗಾಲ ಮತ್ತೆ ಆರಂಭಗೊಂಡು ಇಡೀ ನಗರದ ರಸ್ತೆಗಳು ಮತ್ತಷ್ಟು ಹದಗೆಟ್ಟು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಸಚಿವರ ವಿರುದ್ಧ ಅಸಮಾಧಾನ 
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಸೂಕ್ತ ಸ್ಪಂದನ ನೀಡುತ್ತಿದ್ದರು. ಆದರೆ, ಪ್ರಸ್ತುತ ಇರುವ ಉಸ್ತುವಾರಿ ಸಚಿವ ಸೀತಾರಾಂ ಅವರು ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ವಿಫ‌ಲರಾಗಿದ್ದಾರೆ ಎಂದು ಹರೀಶ್‌ ಜಿ. ಆಚಾರ್ಯ ಬೇಸರ ವ್ಯಕ್ತ¤ಪಡಿಸಿದರು. ಈ ಹಿಂದೆ ರೇಸ್‌ಕೋರ್ಸ್‌ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಲು ವೀರನಾಡು ರಕ್ಷಣಾ ವೇದಿಕೆ ಮುಂದಾಗಿತ್ತು. ಆದರೆ ಇದಕ್ಕೆ ಅವಕಾಶ ನೀಡದ ನಗರಸಭೆ ಕೊನೇ ಗಳಿಗೆಯಲ್ಲಿ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವ ಕಾರ್ಯ ನಡೆಸಿತು. ಆದರೆ ನಗರದ ಉಳಿದ ರಸ್ತೆಗಳನ್ನು  ನಿರ್ಲಕ್ಷಿಸಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  

 ಪ್ರತಿಭಟನೆಯಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಇ.ಎಲ್‌.ಸುರೇಶ್‌ ಶೆಣೈ, ಮಡಿಕೇರಿ ನಗರ ಅಧ್ಯಕ್ಷ ಪ್ರದೀಪ್‌ ಕರ್ಕೆರ, ಗೌರವಾಧ್ಯಕ್ಷರಾದ ಗಣೇಶ್‌ ರೈ, ಕಾರ್ಯದರ್ಶಿಗಳಾದ ಪ್ರವೀಣ್‌ (ಪಮ್ಮಿ), ಜಗದೀಶ್‌, ದಯಾನಂದ, ಹುರೈರ, ಜಯರಾಂ ಕೋಳಿಬೈಲು ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next